ಸೆಲ್ಫಿ ತೆಗೆಯಲು ಮುಂದಾದ ವ್ಯಕ್ತಿಯನ್ನು ತುಳಿದು ಕೊಂದ ಕಾಡಾನೆ
ಮಹಾರಾಷ್ಟ್ರ: ಸೆಲ್ಫಿ ತೆಗೆಯಲು ಮುಂದಾದ ಕಾರ್ಮಿಕನನ್ನು ಕಾಡಾನೆಯೊಂದು ತುಳಿದು ಕೊಂದಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಶ್ರೀಕಾಂತ್ ರಾಮಚಂದ್ರ ಸಾತ್ರೆ(23) ಕಾಡಾನೆ ದಾಳಿಯಿಂದ ಮೃತಪಟ್ಟವರು. ಶ್ರೀಕಾಂತ್ ಸಾತ್ರೆ ನವೆಗಾಂವ್ನಿಂದ ಕೇಬಲ್ ಅಳವಡಿಕೆ ಕೆಲಸಕ್ಕಾಗಿ ಗಡ್ಚಿರೋಲಿಗೆ ತನ್ನ ಸ್ನೇಹಿತರೊಂದಿಗೆ ಬಂದಿದ್ದರು.
ಶ್ರೀಕಾಂತ್ ತನ್ನ ಇಬ್ಬರು ಸ್ನೇಹಿತರ ಜೊತೆ ಗುರುವಾರ ಬೆಳಿಗ್ಗೆ ಮಹಾರಾಷ್ಟ್ರದ ಗಡ್ಚಿರೋಲಿಯ ಅಬಾಪುರ ಅರಣ್ಯಕ್ಕೆ ಕಾಡಾನೆಯನ್ನು ನೋಡಲು ತೆರಳಿದ್ದರು. ಅರಣ್ಯದಲ್ಲಿ ಸೆಲ್ಫಿ ತೆಗೆಯುವಾಗ ಶ್ರೀಕಾಂತ್ ಮೇಲೆ ಕಾಡಾನೆ ದಾಳಿ ಮಾಡಿದೆ.
ಎರಡು ದಿನಗಳ ಹಿಂದೆ ಚಿತ್ತಗಾಂಗ್ ಮತ್ತು ಗಡ್ಚಿರೋಲಿ ಅರಣ್ಯ ಪ್ರದೇಶದಿಂದ ಕಾಡಾನೆ ಹೊರಬರುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಮುಟ್ನೂರು ಅರಣ್ಯ ಪ್ರದೇಶದ ಅಬಾಪುರ ಅರಣ್ಯದಲ್ಲಿ ಆನೆ ಇದೆ ಎಂದು ತಿಳಿಸಲಾಗಿತ್ತು. ಆದರೆ, ಶ್ರೀಕಾಂತ್ ಮತ್ತು ಆತನ ಇಬ್ಬರು ಸ್ನೇಹಿತರು ಕೆಲಸದ ನಿಮಿತ್ತ ಆ ಪ್ರದೇಶದಲ್ಲಿದ್ದರು ಮತ್ತು ಆನೆ ವೀಕ್ಷಣೆಗೆಂದು ತೆರಳಿದ್ದರು.
ಶ್ರೀಕಾಂತ್ ದೂರದಿಂದಲೇ ಆನೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆತನ ಮೇಲೆ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಆತನ ಇಬ್ಬರು ಸ್ನೇಹಿತರು ಓಡಿ ಹೋಗಿ ಪ್ರಾಣ ಉಳಿಸಿಕೊಂಡು ಪಾರಾಗಿದ್ದಾರೆ.