ಮಂಗಳೂರು ವಿವಿಯಲ್ಲಿ ಗಣೇಶೋತ್ಸವ ಮಾಡ್ತೀವಿ, ಅರೆಸ್ಟ್ ಮಾಡಿದರೆ ಸಂತೋಷ : ಪ್ರಭಾಕರ ಭಟ್ ಕಲ್ಲಡ್ಕ

Update: 2023-09-10 16:38 GMT

ಮಂಗಳೂರು, ಸೆ.10: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗಣೇಶೋತ್ಸವ ಮಾಡಿಯೇ ಮಾಡುತ್ತೇವೆ, ನಾವೇನೂ ಹೊರಗಿನವರಲ್ಲ, ಹೊರಗಿನವರೆಂದು ನನ್ನನ್ನು ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ. ಯಾಕೆಂದರೆ ಅರೆಸ್ಟ್ ಆಗದೇ ತುಂಬಾ ಸಮಯ ಆಯಿತು ಎಂದು ಆರ್‌ಎಸ್‌ಎಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.

ಮಂಗಳೂರು ವಿವಿಯಲ್ಲಿ ಗಣೇಶೋತ್ಸವಕ್ಕೆ ಎದುರಾಗಿರುವ ವಿರೋಧ ಮತ್ತು ತಮಿಳುನಾಡು ಸಚಿವ ಉದಯನಿಧಿ ಹೇಳಿಕೆ ಖಂಡಿಸಿ ರವಿವಾರ ಅಸೈಗೋಳಿ ಮೈದಾನದಲ್ಲಿ ಸಂಘಪರಿವಾರ ಹಮ್ಮಿಕೊಂಡ ಸಾಮೂಹಿಕ ಭಜನಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು.

ನಾವೆಲ್ಲರೂ ಈ ದೇಶದಲ್ಲಿ ಇರುವವರು, ಹಾಗಿರುವಾಗ ಹೊರಗಿನವರೆಂದರೆ ಯಾರು? ನಾವೆಲ್ಲರೂ ಗಣೇಶನ ಭಕ್ತರೇ, ವಿವಿಯ ಒಳಗಿರುವ ವಿದ್ಯಾರ್ಥಿಗಳು ಬೇರೆ ಬೇರೆ ಜಾಗದಿಂದ ಬಂದವರು. ಇಡೀ ರಾಜ್ಯದಿಂದ ಅಲ್ಲಿಗೆ ಜನ ಬರುವುದರಿಂದ ಹೊರಗಿನವರು ಎಂದಿಲ್ಲ. ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರುತ್ತೇವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸ್ಪೀಕರ್ ಎಲ್ಲರನ್ನು ಸಮಾನ ರೀತಿಯಲ್ಲಿ ನೋಡಬೇಕೇ ಹೊರತು ಹಾಗೆಲ್ಲಾ ಮಾತನಾಡಬಾರದು. ನಮ್ಮದು ಧರ್ಮಾಧರಿತ ದೇಶ. ನಿಮ್ಮ ದೇವರನ್ನು ನೀವು ಪೂಜಿಸಿ, ನಮ್ಮ ಆಚರಣೆಗೆ ವಿರೋಧಿಸಬೇಡಿ ಎಂದರು.

ವಿವಿ ಅನ್ನೋದು ಹಿಂದೂ ಮೆಜಾರಿಟಿ ಇರೋ ಒಂದು ಸಂಸ್ಥೆ. ಅಲ್ಲಿ ದೇವರನ್ನು ಪೂಜೆ ಮಾಡಬಾರದು ಅಂದ್ರೆ ಏನರ್ಥ. ಸೆಕ್ಯೂಲರ್ ಹೆಸರಿನಿಂದ ಹಿಂದೂಗಳ ಜೀವನಕ್ಕೆ ತೊಂದರೆ ಆಗಿದೆ. ಅವರ ಮಸೀದಿ, ಮನೆಯಲ್ಲಿ ಅಲ್ಲಾನನ್ನೇ ಪೂಜೆ ಮಾಡಲಿ. ವಿವಿಯಲ್ಲಿ ಅಲ್ಲಾನನ್ನ ಪೂಜೆ ಮಾಡುವುದಾದರೆ ಮಾಡಲಿ. ಇವರು ಕಮ್ಯುನಿಸ್ಟರಿಗೆ ಕಾರ್ಯಕ್ರಮ ಮಾಡಲು ವಿವಿಯಲ್ಲಿ ಅವಕಾಶ ಕೊಡ್ತಾರೆ. ಹಿಂದೂ ವಿರೋಧಿಯಾಗಿ ಮಾತನಾಡುವ ಶಂಸುಲ್ ಇಸ್ಲಾಂಗೆ ಅವಕಾಶ ಕೊಡಲಿಲ್ವಾ? ನಮಗೆ ಈಗ ಸಮಸ್ಯೆ ಬಂದಿರೋದು ಕಾಂಗ್ರೆಸ್‌ನಿಂದ. ಕಾಂಗ್ರೆಸ್ ನಮ್ಮನ್ನ ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು. ಈಗಲೂ ಪಾಕಿಸ್ತಾನ ಜಿಂದಾಬಾದ್ ಹೇಳುವವರು, ಕುಮ್ಮಕ್ಕು ಕೊಡೋರು ಇದ್ದು ಕಾಂಗ್ರೆಸ್ ಅವರಿಗೆ ಬೆಂಬಲ ಕೊಡುತ್ತಿದೆ ಎಂದು ಆರೋಪಿಸಿದರು.

ಮಂಗಳೂರು ವಿವಿಯ ಶೈಕ್ಷಣಿಕ ಗುಣಮಟ್ಟ ಕಡಿಮೆ ಆಗಿದೆ ಎಂದು ಸ್ಪೀಕರ್ ಖಾದರ್ ಹೇಳಿದ್ದಾರೆ. ಅದಕ್ಕಾಗಿ ಗಣೇಶನನ್ನು ಕೂರಿಸಿ, ಆಗ ಮತ್ತೆ ಗುಣಮಟ್ಟ ಮೇಲೆ ಬರುತ್ತೆ. ನಮಗೆ ಇನ್ನೂ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಈ ಹೋರಾಟ. ನಮ್ಮತನ ಉಳಿಸುವ ಉದ್ದೇಶದಿಂದ ಈ ಹೋರಾಟ. ಭಯೋತ್ಪಾದಕ ಮುಸಲ್ಮಾನರು, ಮತಾಂತರಿ ಕ್ರಿಶ್ಚಿಯನ್ನರ ಮಧ್ಯೆ ಹಿಂದೂ ಸಮಾಜ ಎದ್ದು ನಿಲ್ಲಬೇಕಿದೆ. ಮಂಚಿಯ ಶಾಲೆಯಲ್ಲಿ ಸಾವರ್ಕರ್‌ಗೆ ಜೈಕಾರ ಹಾಕಿದ್ದಕ್ಕೆ ವಿರೋಧ ಮಾಡಿ ಅಲ್ಲಿನ ಶಿಕ್ಷಕಿಯತ್ರ ಕ್ಷಮೆ ಕೇಳಿಸಿದ್ರು. ಸಾವರ್ಕರ್ ಕೂದಲಿನಷ್ಟೂ ಬೆಲೆ ಇಲ್ಲದ ಇವರು ಅವರ ಬಗ್ಗೆ ಮಾತನಾಡುತ್ತಾರೆ ಎಂದು ಕಿಡಿಕಾರಿದರು.

ಸ್ಟಾಲಿನ್ ಪುತ್ರ ಉದಯನಿಧಿ ಎಂಬ ಮಂತ್ರಿ ತನ್ನ ಕಂತ್ರಿ ಬುದ್ದಿ ತೋರಿಸಿರೆ ಕಾಂಗ್ರೆಸ್ ಏನೂ ಮಾತನಾಡಲ್ಲ, ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇನ್ನೊಬ್ಬ ಗೃಹಮಂತ್ರಿ ಹೆಸರು ಪರಮೇಶ್ವರ್, ಹೆಸರಲ್ಲೇ ಈಶ್ವರ ಇದೆ. ಆದರೂ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ಗಣೇಶ ಎಲ್ಲ ಅಡ್ಡಿಗಳ ನಿವಾರಿಸುವ ಮೊಟ್ಟ ಮೊದಲ ದೇವರು. ಅವನು ವಿಘ್ನ ನಿವಾರಕ, ಸರ್ವವ್ಯಾಪಿ ಇರೋನು. ಮುಸ್ಲಿಮರೇ ಇರುವ ಇಂಡೋನೇಷ್ಯಾದ ನೋಟಿನ ಮೇಲೆ ಗಣೇಶನ ಚಿತ್ರ ಇದೆ. ನಾವು ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿಯೇ ಮಾಡುತ್ತೇವೆ. ಇದಕ್ಕೆ ವಿವಿಯ ಅಮೀನರು ಹಾಗೂ ರಾಜ್ಯದ ಅಮೀನರಾದ ಸ್ಪೀಕರ್ ಕೂಡ ಬೆಂಬಲ ಕೊಡಬೇಕು ಎಂದು ಆಗ್ರಹಿಸಿದರು.

ರವಿ ಕಲ್ಕಟ್ಟ ಭಜನೆ ಮೂಲಕ ಕಾರ್ಯಕ್ರಮ ಆರಂಭಿಸಿದರು. ಲತಾ ವಂದಿಸಿದರು. ಭಾಸ್ಕರ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News