ಪೂಂಚ್‍ನಲ್ಲಿ ದಾಳಿ: ವಾಯುಪಡೆಯ ಯೋಧ ಸಾವು, ನಾಲ್ವರಿಗೆ ಗಾಯ

Update: 2024-05-05 05:30 GMT

Photo: timesofindia.indiatimes.com

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದಲ್ಲಿ ಪರ್ವತ ರಸ್ತೆಯಲ್ಲಿ ತೆರಳುತ್ತಿದ್ದ ಭಾರತೀಯ ವಾಯುಪಡೆಯ ವಾಹನದ ಮೇಲೆ ಶನಿವಾರ ಸಂಜೆ ಉಗ್ರರು ನಡೆಸಿದ ದಾಳಿ ಮತ್ತು ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ವಾಯುಪಡೆಯ ಒಬ್ಬ ಯೋಧ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಐದು ಮಂದಿ ಗಾಯಾಳುಗಳನ್ನು ತಕ್ಷಣ ಪಕ್ಕದ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಈ ಪೈಕಿ ಒಬ್ಬರು ಮೃತಪಟ್ಟರು. ಈ ದಾಳಿಯ ಬೆನ್ನಲ್ಲೇ ಪೊಲೀಸರು ಮತ್ತು ಸೇನೆ ಈ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದೆ.

"ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್ ಮತ್ತು ಐಎಎಫ್ ವಾಹನಗಳನ್ನು ಪೂಂಚ್ ಜಿಲ್ಲೆಯ ಸನೈ ಸತ್ತಾರ್ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆ ಬಳಿ ಗುರಿ ಮಾಡಲಾಗಿತ್ತು ಎಂದು ಅಧಿಕೃತ ಮೂಲಗಳು ಹೇಳಿವೆ.

ಪೂಂಚ್ ಸೆಕ್ಟರ್‍ನಲ್ಲಿ ನಿಯೋಜಿಸಿದ ರಾಡಾರ್‍ಗಳ ತಾಂತ್ರಿಕ ಕೆಲಸ ಮುಗಿಸಿ ಈ ವಾಹನಗಳಲ್ಲಿ ಜಿಲ್ಲೆಯ ಸುರನ್‍ಕೋಟೆ ಪ್ರದೇಶದ ಸನೈ ಟಾಪ್‍ಗೆ ವಾಪಾಸು ಬರಲಾಗುತ್ತಿತ್ತು. ಮೇ 7ರಂದು ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ತೊಂದರೆ ಉಂಟುಮಾಡುವುದು ದಾಳಿಯ ಉದ್ದೇಶವಾಗಿತ್ತು ಎನ್ನಲಾಗಿದೆ. ಪಾಕಿಸ್ತಾನದ ಗಡಿ ಜಿಲ್ಲೆಯಲ್ಲಿ ಉಗ್ರರ ಚಲನ ವಲನ ಬಗ್ಗೆ ಸಿಕ್ಕಿದ ಮಾಹಿತಿ ಆಧಾರದಲ್ಲಿ ಪೂಂಚ್ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News