ದುಡಿಯುವ ಬಂಡವಾಳದ ಅಗತ್ಯಕ್ಕೆ ನೆರವಾಗಲು ಎಫ್ ಸಿಐಗೆ 10 ಸಾವಿರ ಕೋಟಿ ರೂ. ಪೂರೈಕೆ
ಹೊಸದಿಲ್ಲಿ: ಭಾರತದ ಆಹಾರ ನಿಗಮ (ಎಫ್ಸಿಐ)ಗೆ ದುಡಿಯುವ ಬಂಡವಾಳದ ಅಗತ್ಯತೆಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ 10,700 ಕೋಟಿ ರೂಪಾಯಿಗಳನ್ನು ಪೂರೈಕೆ ಮಾಡಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧರಿಸಿದೆ. ಇದರಿಂದ ಬಡ್ಡಿ ಹೊರೆ ವಾರ್ಷಿಕವಾಗಿ 800 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಲಿದ್ದು, ಸರ್ಕಾರದ ಸಬ್ಸಿಡಿ ಮೊತ್ತವೂ ಕಡಿತಗೊಳ್ಳಲು ಅನುಕೂಲವಾಗಲಿದೆ.
ಕೃಷಿ ವಲಯಕ್ಕೆ ಉತ್ತೇಜನ ನೀಡುವ ಉದೇಶದ ಈ ನಿರ್ಧಾರ ದೇಶಾದ್ಯಂತ ರೈತರ ಕಲ್ಯಾಣಕ್ಕೂ ಪೂರಕವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. "ಈ ಪ್ರಮುಖ ನಡೆಯು ರೈತರನ್ನು ಬೆಂಬಲಿಸುವ ಸರ್ಕಾರದ ದೃಢ ನಿರ್ಧಾರದ ಬದ್ಧತೆಯನ್ನು ಮತ್ತು ದೇಶದ ಕೃಷಿ ಆರ್ಥಿಕತೆಯನ್ನು ಭದ್ರ ಪಡಿಸುವ ಹೆಜ್ಜೆಯಾಗಿದೆ" ಎಂದು ಪ್ರಕಟಿಸಿದೆ.
ಎಫ್ಸಿಐ ಕೇವಲ 100 ಕೋಟಿ ರೂಪಾಯಿ ಅಧಿಕೃತ ಬಂಡವಾಳ ಹಾಗೂ 4 ಕೋಟಿ ರೂಪಾಯಿ ಈಕ್ವಿಟಿಯೊಂದಿಗೆ 1964ರಲ್ಲಿ ಪಯಣ ಆರಂಭಿಸಿತ್ತು. ಇದರ ಕಾರ್ಯಾಚರಣೆಗಳು ಹಲವು ಪಟ್ಟು ಹೆಚ್ಚಳಗೊಂಡು 2023ರ ವೇಳೆಗೆ 21 ಸಾವಿರ ಕೋಟಿ ರೂಪಾಯಿ ತಲುಪಿದೆ. ಇದೀಗ ಸರ್ಕಾರವು 10700 ಕೋಟಿ ರೂಪಾಯಿಗಳನ್ನು ಈಕ್ವಿಟಿಯಾಗಿ ಎಫ್ಸಿಐಗೆ ನೀಡುವುದರಂದ ಸಂಸ್ಥೆಯ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ ಮತ್ತು ಅದರ ಪರಿವರ್ತನೆಯ ಉಪಕ್ರಮಗಳಿಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಸರ್ಕಾರಿ ಪ್ರಕಟಣೆ ಹೇಳಿದೆ.
ಇದು ಎಫ್ಸಿಐ ಕಾರ್ಯಾಚರಣೆ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನೆರವಾಗಲಿದೆ. ಎಫ್ಸಿಐ ಮತ್ತೆ ಅಲ್ಪಾವಧಿ ಸಾಲವನ್ನು ನೆರವಿನ ಅಂತರ ಭರ್ತಿ ಮಾಡಿಕೊಳ್ಳುವ ಸಲುವಾಗಿ ನೀಡಲು ಆರಂಭಿಸಲಿದೆ. ಇದು ಬಡ್ಡಿ ಹೊರೆಯನ್ನು ಕಡಿಮೆ ಮಾಡಲಿದ್ದು, ಸರ್ಕಾರಿ ಸಬ್ಸಿಡಿಯನ್ನು ಕೂಡಾ ಕಡಿಮೆ ಮಾಡಲು ನೆರವಾಗಲಿದೆ ಎಂದು ವಿವರಿಸಿದೆ.