ಅದಾನಿ ಪೋರ್ಟ್ಸ್ ನಿಂದ 108 ಹೆಕ್ಟೇರ್ ಭೂಮಿ ವಾಪಸ್ | ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ
ಹೊಸದಿಲ್ಲಿ : ಕಛ್ ಜಿಲ್ಲೆಯ ಮುಂದ್ರಾ ಬಂದರು ಸಮೀಪ ಅದಾನಿ ಪೋರ್ಟ್ಸ್ ಗೆ ಮಂಜೂರು ಮಾಡಲಾದ 108 ಹೆಕ್ಟೇರ್ ಗೋಮಾಳ ಭೂಮಿಯನ್ನು ವಾಪಸ್ ಪಡೆಯುವಂತೆ ಗುಜರಾತ್ ಸರಕಾರಕ್ಕೆ ಸೂಚಿಸಿದ್ದ ಗುಜರಾತ್ ಉಚ್ಚ ನ್ಯಾಯಾಲಯದ ಆದೇಶಕ್ಕೆ ಸರ್ವೋಚ್ಚ ನ್ಯಾಯಾಲಯವು ಬುಧವಾರ ತಡೆಯಾಜ್ಞೆಯನ್ನು ನೀಡಿದೆ.
ಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಗುಜರಾತ ಸರಕಾರದಿಂದ ಉತ್ತರವನ್ನು ಕೋರಿದೆ.
2005ರಲ್ಲಿ ನವಿನಾಲ್ ಗ್ರಾಮದ 108 ಹೆಕ್ಟೇರ್ ಭೂಮಿಯನ್ನು ಅದಾನಿ ಪೋರ್ಟ್ಸ್ ಆ್ಯಂಡ್ ಸೆಝ್ಗೆ ಮಂಜೂರು ಮಾಡಲಾಗಿತ್ತು. 2010ರಲ್ಲಿ ಅದಾನಿ ಪೋರ್ಟ್ಸ್ ಈ ಭೂಮಿಗೆ ಬೇಲಿ ನಿರ್ಮಿಸಲು ಆರಂಭಿಸಿದಾಗ ಗ್ರಾಮಸ್ಥರು ಗೋಮಾಳ ಭೂಮಿಯನ್ನು ಅದಕ್ಕೆ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಸಲ್ಲಿಸಿದ್ದರು.
ಗ್ರಾಮದಲ್ಲಿ ಗೋಮಾಳ ಭೂಮಿಯ ಕೊರತೆಯಿದೆ ಮತ್ತು ಅದಾನಿ ಕಂಪನಿಗೆ ಹಂಚಿಕೆಯ ಬಳಿಕ ತಮ್ಮ ಬಳಿ ಕೇವಲ 45 ಎಕರೆ ಭೂಮಿ ಉಳಿಯುತ್ತದೆ ಎಂದು ಗ್ರಾಮಸ್ಥರು ವಾದಿಸಿದ್ದರು.
ಗೋಮಾಳಕ್ಕಾಗಿ 387 ಹೆಕ್ಟೇರ್ ಸರಕಾರಿ ಭೂಮಿಯನ್ನು ಮಂಜೂರು ಮಾಡಿ ಆದೇಶವನ್ನು ಹೊರಡಿಸಲಾಗಿದೆ ಎಂದು 2014ರಲ್ಲಿ ಸರಕಾರವು ತಿಳಿಸಿದ ಬಳಿಕ ಉಚ್ಚ ನ್ಯಾಯಾಲಯವು ಪಿಐಎಲ್ ಅನ್ನು ವಿಲೇವಾರಿಗೊಳಿಸಿತ್ತು.
ಆದರೆ ಸರಕಾರದ ಆದೇಶವು ಕಾರ್ಯರೂಪಕ್ಕೆ ಬರದಿದ್ದಾಗ 2015ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಪುನರ್ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದ ಸರಕಾರವು ಗ್ರಾಮ ಪಂಚಾಯತ್ ಗೆ ಗೋಮಾಳಕ್ಕಾಗಿ ಮಂಜೂರು ಮಾಡಲು ಕೇವಲ 17 ಹೆಕ್ಟೇರ್ ಭೂಮಿ ಲಭ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಉಳಿದ ಭೂಮಿಯನ್ನು ಸುಮಾರು ಏಳು ಕಿ.ಮೀ.ಅಂತರದಲ್ಲಿ ತಾನು ಮಂಜೂರು ಮಾಡಬಹುದಾಗಿದೆ ಎಂಬ ಪ್ರಸ್ತಾವವನ್ನು ಅದು ನ್ಯಾಯಾಲಯದ ಮುಂದಿರಿಸಿತ್ತು. ಇದನ್ನು ತಿರಸ್ಕರಿಸಿದ್ದ ಗ್ರಾಮಸ್ಥರು ಜಾನುವಾರುಗಳು ಮೇಯಲು ಅದು ತುಂಬ ದೂರವಾಗುತ್ತದೆ ಎಂದು ವಾದಿಸಿದ್ದರು.
ಈ ವರ್ಷದ ಎಪ್ರಿಲ್ ನಲ್ಲಿ ಉಚ್ಚ ನ್ಯಾಯಾಲಯವು ಪರಿಹಾರವನ್ನು ಒದಗಿಸುವಂತೆ ಹಿರಿಯ ಕಂದಾಯ ಅಧಿಕಾರಿಯೋರ್ವರಿಗೆ ಸೂಚಿಸಿತ್ತು. 2005ರಲ್ಲಿ ಅದಾನಿ ಪೋರ್ಟ್ಸ್ ಗೆ ಮಂಜೂರು ಮಾಡಿದ್ದ 108 ಹೆಕ್ಟೇರ್ ಭೂಮಿಯನ್ನು ವಾಪಸ್ ಪಡೆಯಲು ರಾಜ್ಯ ಸರಕಾರವು ನಿರ್ಧರಿಸಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಸರಕಾರವು ಅದಾನಿ ಗ್ರೂಪ್ನಿಂದ ವಾಪಸ್ ಪಡೆದ ಭೂಮಿಗೆ ಹೆಚ್ಚುವರಿ ಸರಕಾರಿ ಭೂಮಿಯನ್ನು ಸೇರಿಸಿ ಗ್ರಾಮಸ್ಥರ ಗೋಮಾಳ ಕೊರತೆಯನ್ನು ನೀಗಿಸಲಿದೆ ಎಂದು ಕಂದಾಯ ಇಲಾಖೆಯು ತಿಳಿಸಿತ್ತು. ಇದನ್ನು ಅನುಷ್ಠಾನಿಸುವಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿತ್ತು.