1993ರ ದೇವಬಂದ್ ಸ್ಫೋಟ ಪ್ರಕರಣ | ಜಮ್ಮು-ಕಾಶ್ಮೀರದಲ್ಲಿ ಪ್ರಮುಖ ಆರೋಪಿಯ ಬಂಧನ
ಸಹರಾನ್‌ಪುರ : 1993ರ ದೇವಬಂದ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ನಝೀರ್ ಅಹ್ಮದ್ ವಾನಿಯನ್ನು ರವಿವಾರ ಶ್ರೀನಗರದಲ್ಲಿ ಬಂಧಿಸಲಾಗಿದೆ.
1994ರಲ್ಲಿ ಜಾಮೀನಿನಲ್ಲಿ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ 31 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ವಾನಿ ಕೊನೆಗೂ ಶ್ರೀನಗರದಲ್ಲಿ ಉ.ಪ್ರ.ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮತ್ತು ಸ್ಥಳೀಯ ಪೋಲಿಸರ ಜಂಟಿ ಕಾರ್ಯಾಚರಣೆಯಲ್ಲಿ ಬಲೆಗೆ ಬಿದ್ದಿದ್ದಾನೆ ಎಂದು ಸಹರಾನ್‌ಪುರ ಗ್ರಾಮೀಣ ಎಸ್‌ಪಿ ಸಾಗರ ಜೈನ್ ತಿಳಿಸಿದರು.
1992, ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸದ ಬಳಿಕ ದೇಶಾದ್ಯಂತ ವ್ಯಾಪಕ ಗಲಭೆಗಳು ನಡೆದಿದ್ದವು. 1993, ಆಗಸ್ಟ್‌ನಲ್ಲಿ ದೇವಬಂದ್‌ನಲ್ಲಿ ಕೋಮು ಹಿಂಸಾಚಾರದ ಸಂದರ್ಭ ವಾನಿ ಮತ್ತು ಆತನ ಸಹಚರರು ಪೋಲಿಸ್ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಗಳನ್ನು ಸ್ಫೋಟಿಸಿದ್ದು,ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಗಾಯಗೊಂಡಿದ್ದರು.
ನ್ಯಾಯಾಲಯವು 2024,ಮೇ 20ರಂದು ವಾನಿ ವಿರುದ್ಧ ಕಾಯಂ ಬಂಧನ ವಾರಂಟ್ ಹೊರಡಿಸಿತ್ತು.
ಹಿಜ್ಬುಲ್ ಮುಜಾಹಿದೀನ್ ಜೊತೆ ಗುರುತಿಸಿಕೊಂಡಿದ್ದ ವಾನಿ ಪರಾರಿಯಾದ ಬಳಿಕ ಶ್ರೀನಗರದಲ್ಲಿ ವಾಸವಾಗಿದ್ದ. ಆತನ ಇರುವಿಕೆಯ ಮಾಹಿತಿ ನೀಡುವವರಿಗೆ 25,000 ರೂ.ಗಳ ಬಹುಮಾನವನ್ನು ಘೋಷಿಸಲಾಗಿತ್ತು.