3 ನೂತನ ಕ್ರಿಮಿನಲ್ ಕಾನೂನುಗಳಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್
ಹೊಸದಿಲ್ಲಿ: ಹೊಸದಾಗಿ ರೂಪಿಸಲಾಗಿರುವ ಕ್ರಿಮಿನಲ್ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ಸಾಕ್ಷ್ಯ ಅಧಿನಿಯಮ 2023 ಮತ್ತು ಭಾರತೀಯ ನಾಗರಿಕ ಸುರಕ್ಷಾ (ಸೆಕಂಡ್) ಸಂಹಿತೆ, 2023- ಇವುಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯೊಂದು ದಾಖಲಾಗಿದೆ.
ಇಬ್ಬರು ದಿಲ್ಲಿ ನಿವಾಸಿಗಳಾದ ಅಂಜಲಿ ಪಟೇಲ್ ಮತ್ತು ಛಾಯಾ ಬುಧವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಕಾನೂನುಗಳಿಗೆ ನೀಡಲಾಗಿರುವ ಹೆಸರುಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಈ ಹೆಸರುಗಳು ಗೊಂದಲಕಾರಿಯಾಗಿವೆ ಮತ್ತು ನಿಖರವಾಗಿಲ್ಲ ಎಂದು ಹೇಳಿದ್ದಾರೆ. ಈ ಮೂರು ಕಾನೂನುಗಳ ಹೆಸರುಗಳು ಕಾನೂನುಗಳ ಬಗ್ಗೆ ಅಥವಾ ಅವುಗಳ ಉದ್ದೇಶಗಳ ಬಗ್ಗೆ ಹೇಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮಸೂದೆಗಳನ್ನು 2023ರ ಡಿಸೆಂಬರ್ನಲ್ಲಿ ಸಂಸತ್ ನಲ್ಲಿ ಅಂಗೀಕರಿಸುವಾಗ ‘‘ಅವ್ಯವಹಾರ’’ ನಡೆಸಲಾಗಿತ್ತು ಎಂದು ಆರೋಪಿಸಿರುವ ಅರ್ಜಿಯು, ಅವುಗಳ ಅನುಸ್ಠಾನಕ್ಕೆ ತಡೆಯಾಜ್ಞೆ ನೀಡುವಂತೆ ಸರ್ವೋಚ್ಛ ನ್ಯಾಯಲಯವನ್ನು ಕೋರಿದೆ.
ನೂತನ ಕಾನೂನುಗಳು ಜುಲೈ ಒಂದರಿಂದ ಜಾರಿಗೆ ಬರಲಿವೆ.
ಇದಕ್ಕೂ ಮೊದಲು, ಈ ಮೂರು ಕಾನೂನುಗಳನ್ನು ಪ್ರಶ್ನಿಸಿ ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯೊಂದನ್ನು ಪುರಸ್ಕರಿಸಲು ಮೇ 20ರಂದು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಕಾನೂನುಗಳು ಇನ್ನಷ್ಟೇ ಅನುಷ್ಠಾನಕ್ಕೆ ಬರಬೇಕಾಗಿರುವುದರಿಂದ ಅವುಗಳನ್ನು ಪ್ರಶ್ನಿಸಲು ಇದು ಸೂಕ್ತ ಸಮಯವಲ್ಲ ಎಂದು ನ್ಯಾಯಾಲಯ ಹೇಳಿತ್ತು.