ಅಸ್ಸಾಂನಲ್ಲಿ 4.2 ತೀವ್ರತೆಯ ಭೂಕಂಪನ
ಗುವಾಹಟಿ: ಉತ್ತರ-ಕೇಂದ್ರ ಅಸ್ಸಾಂನಲ್ಲಿ ಇಂದು ಬೆಳಗ್ಗೆ 4.2 ರಿಕ್ಟರ್ ತೀವ್ರತೆಯ ಭೂಕಂಪನ ಸಂಭವಿಸಿದೆ. ಯಾವುದೇ ಹಾನಿ ಆದ ಬಗ್ಗೆ ವರದಿಯಾಗಿಲ್ಲ.
ಉತ್ತರ ಬ್ರಹ್ಮಪುತ್ರ ನದಿ ತೀರದ ಉಡಲ್ಗುರಿ ಜಿಲ್ಲೆಯಲ್ಲಿ ಬೆಳಗ್ಗೆ 7.47 ಗಂಟೆಗೆ ಈ ಭೂಕಂಪನ ಸಂಭವಿಸಿದ್ದು, ಭೂಕಂಪನ ಕೇಂದ್ರವು 15 ಕಿಮೀ ಆಳದಲ್ಲಿತ್ತು ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ ಹೇಳಿದೆ.
ಭೂಕಂಪನದ ಕೇಂದ್ರ ಬಿಂದುವಿನ ನಿಖರ ಸ್ಥಳ ಅಸ್ಸಾಂ-ಅರುಣಾಚಲ ಪ್ರದೇಶ ಗಡಿ ಬಳಿಯ ತೇಜ್ ಪುರ್ ನಿಂದ 48 ಕಿಮೀ ದೂರ ಹಾಗೂ ಗುವಾಹಟಿಯಿಂದ ಗುವಾಹಟಿಯ ಉತ್ತರ ಭಾಗದಿಂದ 105 ಕಿಮೀ ದೂರದಲ್ಲಿತ್ತು ಎಂದು ಹೇಳಲಾಗಿದೆ.
ನೆರೆಯ ದರ್ರಾಂಗ್, ತಮುಲ್ಪಪುರ್, ಸೋನಿತ್ ಪುರ್, ಕಾಮ್ರೂಪ್ ಹಾಗೂ ಬಿಸ್ವನಾಥ್ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ. ದಕ್ಷಿಣ ಬ್ರಹ್ಮಪುತ್ರ ನದಿ ತೀರದಲ್ಲಿರುವ ಮೊರಿಗಾಂವ್ ಹಾಗೂ ನಾಗಾಂವ್ ನಲ್ಲೂ ನಡುಕದ ಅನುಭವವಾಗಿದೆ.
ಪಶ್ಚಿಮ ಅರುಣಾಚಲ ಪ್ರದೇಶ ಹಾಗೂ ಪೂರ್ವ ಭೂತಾನ್ ನಲ್ಲೂ ಭೂಕಂಪನದ ಅನುಭವವವಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಇದುವರೆಗೆ ಯಾವುದೇ ಗಾಯಾಳುಗಳು ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.