ಬಾಬಾ ಸಿದ್ದಿಕ್ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್ ನಿವಾಸಕ್ಕೆ ಭದ್ರತೆ ಹೆಚ್ಚಳ

Update: 2024-10-13 09:59 GMT

ಸಲ್ಮಾನ್ ಖಾನ್ (Photo: PTI)

ಮುಂಬೈ : ಶನಿವಾರ ಸಂಜೆ ಮಾಜಿ ಸಚಿವ ಮತ್ತು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆಯ ನಂತರ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಅಪಾರ್ಟ್ಮೆಂಟ್ ಹೊರಗಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಅವರ ಬಣದ ನಾಯಕ ಬಾಬಾ ಸಿದ್ದಿಕ್ ಅವರಿಗೆ ಬಾಂದ್ರಾದ ನಿರ್ಮಲ್ ನಗರದ ಬಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

ಸಲ್ಮಾನ್ ಖಾನ್ ಶನಿವಾರ ತಡರಾತ್ರಿ ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿ ಗುಂಡೇಟಿನಿಂದ ಮೃತಪಟ್ಟ ಸಿದ್ದಿಕ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.

ತನ್ನ ಗುರಿಯಾಗಿರುವ ಸಲ್ಮಾನ್ ಖಾನ್ ಜೊತೆಗಿನ ಸಂಪರ್ಕವೇ ಬಾಬಾ ಸಿದ್ದಿಕ್ ಕೊಲೆಗೆ ಕಾರಣ ಎಂದು ಬಿಷ್ಣೋಯ್ ಗ್ಯಾಂಗ್ ಮೂಲಗಳು ತಿಳಿಸಿವೆ.

ಈ ಹಿಂದೆ ಏಪ್ರಿಲ್ 14 ರಂದು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ್ದರು. ದಾಳಿಕೋರರಾದ ​​ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ನಂತರ ಗುಜರಾತ್‌ನಲ್ಲಿ ಬಂಧಿಸಲಾಯಿತು.

ಮುಂಬೈ ಪೊಲೀಸರು ಸಿದ್ದಿಕ್ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಇಬ್ಬರು ಬಂಧಿತ ಆರೋಪಿಗಳ ಗುರುತನ್ನು ಬಹಿರಂಗಪಡಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಹರಿಯಾಣ ಮೂಲದ ಗುರ್ಮೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ. ಇಬ್ಬರೂ ಬಿಷ್ಣೋಯ್ ಗ್ಯಾಂಗ್ ಗೆ ಸೇರಿದವರು ಎನ್ನಲಾಗಿದೆ.

ಸಿದ್ದಿಕ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ರವಿವಾರ ಘೋಷಿಸಿದ್ದಾರೆ.

ಸಿದ್ದಿಕ್ ಅವರು 2004-2008ರ ಅವಧಿಯಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ಸಚಿವರಾಗಿ ಮತ್ತು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (MHADA) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸಿದ್ದಿಕಿ ಹತ್ಯೆಯ ತನಿಖೆಗಾಗಿ ಐದು ತಂಡಗಳನ್ನು ರಚಿಸಿ ವಿವಿಧ ರಾಜ್ಯಗಳಿಗೆ ಕಳುಹಿಸಲಾಗಿದೆ ಮತ್ತು ಘಟನೆಯ ಹಿಂದೆ ಯಾರಿದ್ದಾರೆ ಎಂಬುದು 2-3 ದಿನಗಳಲ್ಲಿ ತಿಳಿಯಲಿದೆ ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ರವಿವಾರ ಹೇಳಿದ್ದಾರೆ.

ಅಜಿತ್ ಪವಾರ್ ಕೂಪರ್ ಆಸ್ಪತ್ರೆಗೆ ತೆರಳಿ ಅಲ್ಲಿ ಬಾಬಾ ಸಿದ್ದಿಕ್ ಅವರ ಮಗ ಜೀಶನ್ ಸಿದ್ದಿಕ್ ಅವರನ್ನು ಭೇಟಿ ಮಾಡಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News