ಬಾಬಾ ಸಿದ್ದಿಕ್ ಹಂತಕರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಸೇರಿದವರು : ವರದಿ
ಮುಂಬೈ : ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತರು ತಾವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇನ್ನೂ ಹತ್ಯೆಯ ಹೊಣೆ ಹೊತ್ತುಕೊಳ್ಳದಿರುವುದರಿಂದ ಪೊಲೀಸರು ಈ ಹೇಳಿಕೆಯನ್ನು ಇನ್ನೂ ದೃಢಪಡಿಸಿಲ್ಲ ಎಂದು ತಿಳಿದುಬಂದಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ಬಣದ ಪ್ರಮುಖ ರಾಜಕಾರಣಿ ಮತ್ತು ಬಾಂದ್ರಾ ವೆಸ್ಟ್ ನಿಂದ ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕ್ (66) ಅವರನ್ನು ಶನಿವಾರ ರಾತ್ರಿ ಬಾಂದ್ರಾದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅವರ ಮಗನ ಕಚೇರಿ ಬಳಿಯೇ ಸಿದ್ದಿಕ್ ಮೇಲೆ ಕನಿಷ್ಠ ಆರು ಗುಂಡುಗಳನ್ನು ಹಾರಿಸಲಾಯಿತು. ನಾಲ್ಕು ಗುಂಡುಗಳು ಅವರ ಎದೆಗೆ ಹೊಕ್ಕಿವೆ ಎನ್ನಲಾಗಿದೆ. ಇದು ಕಾಂಟ್ರಾಕ್ಟ್ ಕಿಲ್ಲಿಂಗ್ ಎಂದು ಶಂಕಿಸಿರುವ ಪೊಲೀಸರು ಪ್ರಕರಣದ ತನಿಖೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ದಸರಾ ಹಬ್ಬದಾಚರಣೆಯ ಸಂದರ್ಭದಲ್ಲಿ ನಡೆದ ಶೂಟಿಂಗ್ ಅನ್ನು ಮೂವರು ವ್ಯಕ್ತಿಗಳು ನಡೆಸಿದ್ದರು ಎನ್ನಲಾಗಿದೆ. ಈ ಪೈಕಿ ಹರ್ಯಾಣದ ಕರ್ನೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.
ವಿಚಾರಣೆಯ ಸಂದರ್ಭದಲ್ಲಿ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಗೆ, ಇಬ್ಬರು ಬಂಧಿತ ಶಂಕಿತರು ಬಾಂದ್ರಾ ವೆಸ್ಟ್ ನಲ್ಲಿ ಸುಮಾರು ಒಂದು ತಿಂಗಳ ಕಾಲ ಶೂಟಿಂಗ್ ಸ್ಪಾಟ್‌ನಲ್ಲಿ ಒಂದು ತಿಂಗಳ ಕಾಲ ಹತ್ಯೆ ಗೆ ತಯಾರಿ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಆರೋಪಿಗಳು ನಿನ್ನೆ ರಾತ್ರಿ ಆಟೋ ರಿಕ್ಷಾದಲ್ಲಿ ಘಟನಾ ಸ್ಥಳಕ್ಕೆ ಬಂದಿದ್ದರು ಎನ್ನಲಾಗಿದೆ. ಹತ್ಯೆಗೆ ಮುಂಚೆ ಅವರು ಸಿದ್ದಿಕ್ ಅವರಿಗಾಗಿ ಕಾಯುತ್ತಿದ್ದರು ಎಂದು ಅಪರಾಧ ವಿಭಾಗದ ಮೂಲಗಳು ತಿಳಿಸಿವೆ.
ಪೊಲೀಸರು ಪ್ರಕರಣವನ್ನು ಬಿಷ್ಣೋಯ್ ಗ್ಯಾಂಗ್ ಮತ್ತು ಇನ್ನೊಂದು ಸ್ಲಂ ಪುನರ್ವಸತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ದೃಷ್ಟಿ ಕೋನದಿಂದ ತನಿಖೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.