ಬಾಬಾ ಸಿದ್ದಿಕ್ ಹತ್ಯೆ: ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದ ರಾಹುಲ್ ಗಾಂಧಿ

Update: 2024-10-13 09:33 GMT

ರಾಹುಲ್ ಗಾಂಧಿ

ಹೊಸದಿಲ್ಲಿ: ಎನ್ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದಿಕ್ ಹತ್ಯೆಗೆ ಆಘಾತ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿತಗೊಂಡಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಬಾಬಾ ಸಿದ್ದಿಕ್ ಅವರ ದುರಂತಮಯ ಸಾವು ಆಘಾತಕಾರಿಯಾಗಿದ್ದು, ನೋವನ್ನುಂಟು ಮಾಡಿದೆ. ಈ ಕಷ್ಟಕರ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಬರೆದುಕೊಂಡಿದ್ದಾರೆ.

“ಈ ಆಘಾತಕಾರಿ ಘಟನೆಯು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿತಗೊಂಡಿರುವುದನ್ನು ಬಯಲುಗೊಳಿಸಿದೆ” ಎಂದೂ ಹೇಳಿದ್ದಾರೆ.

ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರ ಪ್ರಕಾರ, ಎದೆಗೆ ಬಿದ್ದ ಎರಡು ಗುಂಡೇಟಿನಿಂದ ಗಾಯಗೊಂಡಿದ್ದ ಬಾಬಾ ಸಿದ್ದಿಕ್ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಚಿಕಿತ್ಸೆಗೆ ಕರೆ ತರಲಾಗಿತ್ತು ಎಂದು ಹೇಳಲಾಗಿದೆ.

ಶನಿವಾರ ರಾತ್ರಿ 9.30ರ ವೇಳೆಗೆ ಬಾಬಾ ಸಿದ್ದಿಕ್ ಅವರನ್ನು ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ, ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಕೆಲ ಹೊತ್ತಿನಲ್ಲೇ ಮೃತಪಟ್ಟರು ಎನ್ನಲಾಗಿದೆ.

ಇಬ್ಬರು ಶಂಕಿತರ ಬಂಧನವನ್ನು ದೃಢಪಡಿಸಿರುವ ಮುಂಬೈ ಪೊಲೀಸರು, ಶಂಕಿತ ಆರೋಪಿಗಳನ್ನು ಹರ್ಯಾಣದ ಗುರ್ಮೆಲ್ ಸಿಂಗ್ ಹಾಗೂ ಉತ್ತರ ಪ್ರದೇಶದ ಧರಂರಾಜ್ ಕಶ್ಯಪ್ ಎಂದು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ಅವರಿಬ್ಬರೂ 20 ವರ್ಷ ವಯಸ್ಸಿನವರಾಗಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News