ಉತ್ತರಪ್ರದೇಶ | ತಾಯಿ ಮತ್ತು ನಾಲ್ವರು ಸಹೋದರಿಯರ ಕೊಲೆ : ಆರೋಪಿಯ ಬಂಧನ
ಲಕ್ನೋ: ಉತ್ತರಪ್ರದೇಶದ ಲಕ್ನೋದ ಹೋಟೆಲ್ ವೊಂದರಲ್ಲಿ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ವ್ಯಕ್ತಿಯೋರ್ವ ಕೊಲೆಗೈದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅರ್ಷದ್ (24) ಕೃತ್ಯವನ್ನು ಎಸಗಿದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಸಹೋದರಿಯರಾದ ಆಲಿಯಾ (9), ಅಲ್ಶಿಯಾ (19), ಅಕ್ಸಾ(16) ಮತ್ತು ರಹಮೀನ್ (18) ಅವರನ್ನು ಮತ್ತು ತಾಯಿ ಅಸ್ಮಾ ಅವರನ್ನು ಕೊಲೆ ಮಾಡಿದ್ದಾನೆ.
ಬುಧವಾರ ಮುಂಜಾನೆ ಲಕ್ನೋದ ಹೋಟೆಲ್ ನಲ್ಲಿ ಅಪ್ರಾಪ್ತೆ ಸೇರಿ ಒಂದೇ ಕುಟುಂಬದ ಐವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಭೀಕರ ಕೃತ್ಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ.
ಡಿಸಿಪಿ ರವೀನಾ ತ್ಯಾಗಿ ಈ ಕುರಿತು ಪ್ರತಿಕ್ರಿಯಿಸಿದ್ದು, ʼಲಕ್ನೋ ನಾಕಾ ಪ್ರದೇಶದ ಹೋಟೆಲ್ ಶರಣಜಿತ್ ನಲ್ಲಿ ಈ ಘಟನೆ ನಡೆದಿದೆ. ಆರೋಪಿ ಅರ್ಷದ್ ಎಂಬಾತನನ್ನು ಬಂಧಿಸಲಾಗಿದೆ. ಕೌಟುಂಬಿಕ ಕಲಹದಿಂದ ಈತ ಈ ಕೃತ್ಯವನ್ನು ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಫೋರೆನ್ಸಿಕ್ ತಂಡಗಳನ್ನು ಕಳುಹಿಸಲಾಗಿದೆʼ ಎಂದು ಹೇಳಿದ್ದಾರೆ.