ಮಣಿಪುರ | ಮಹಿಳೆಯೊಬ್ಬರ ಮೇಲೆ ಭದ್ರತಾ ಪಡೆಗಳು ದೌರ್ಜನ್ಯ ನಡೆಸಿವೆ ಎಂದು ಆರೋಪಿಸಿ ಕುಕಿ-ಝೋ ಬಾಹುಳ್ಯದ ಪ್ರದೇಶಗಳಲ್ಲಿ ವಾಣಿಜ್ಯ ಮುಷ್ಕರ
ಚೂರಚಂದಪುರ್: ಭದ್ರತಾ ಪಡೆಗಳು ಕಾಂಗ್ಪೋಕ್ಪಿ ಜಿಲ್ಲೆಯ ಗ್ರಾಮವೊಂದರಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ನಡೆಸಿವೆ ಎಂದು ಆರೋಪಿಸಿ ಕುಕಿ-ಝೋ ಬಾಹುಳ್ಯವಿರುವ ಪ್ರದೇಶಗಳಲ್ಲಿ ಬುಡಕಟ್ಟು ಸಂಘಟನೆಯೊಂದು ಕರೆ ನೀಡಿರುವ ವಾಣಿಜ್ಯ ಮುಷ್ಕರವು ಪ್ರಗತಿಯಲ್ಲಿದೆ ಎಂದು ಶುಕ್ರವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಯಿಬೋಲ್ ಗ್ರಾಮದಲ್ಲಿ ಡಿಸೆಂಬರ್ 31ರಂದು ಮಹಿಳೆಯೊಬ್ಬರ ಮೇಲೆ ಭದ್ರತಾ ಪಡೆಗಳು ಲಾಠಿ ಚಾರ್ಜ್ ನಡೆಸಿವೆ ಎಂದು ಆರೋಪಿಸಿ ಮತ್ತೊಂದು ಬುಡಕಟ್ಟು ಸಂಘಟನೆಯಾದ ಟ್ರೈಬಲ್ ಯೂನಿಟಿ ಕೂಡಾ 24 ಗಂಟೆಗಳ ಮುಷ್ಕರಕ್ಕೆ ಕರೆ ನೀಡಿದೆ.
ಬುಡಕಟ್ಟು ಸಮುದಾಯಗಳ ಹಕ್ಕು ಮತ್ತು ಘನತೆಗೆ ಅಗೌರವ ತೋರಿರುವುದನ್ನು ಪ್ರತಿಭಟಿಸಿ ಜನವರಿ 2ರ ಮಧ್ಯರಾತ್ರಿಯಿಂದ ಪ್ರಾರಂಭಗೊಂಡಿರುವ ವಾಣಿಜ್ಯ ಮುಷ್ಕರವು ಶನಿವಾರ ಮಧ್ಯಾಹ್ನ 2 ಗಂಟೆಯವರೆಗೆ ಮುಂದುವರಿಯಲಿದೆ ಎಂದು ಬುಡಕಟ್ಟು ಸಂಘಟನೆಯಾದ ಕುಕಿ-ಝೋ ಕೌನ್ಸಿಲ್ ಹೇಳಿದೆ.
ಈ ಮುಷ್ಕರದ ಸಂದರ್ಭದಲ್ಲಿ ಕುಕಿ-ಝೋ ಸಮುದಾಯಗಳು ವಾಸಿಸುತ್ತಿರುವ ಪ್ರದೇಶಗಳ ಮೂಲಕ ವಾಹನಗಳ ಸಂಚಾರ ಹಾಗೂ ಅಗತ್ಯ ವಸ್ತುಗಳ ಸಾಗಣೆಯನ್ನು ನಿರ್ಬಂಧಿಸಲಾಗಿದೆ ಎಂದು ಅದು ಹೇಳಿದೆ.
ಭದ್ರತಾ ಪಡೆಗಳ ಲಾಠಿ ಚಾರ್ಜ್ ನಲ್ಲಿ ಗಾಯಗೊಂಡಿರುವ ಮಹಿಳೆಗೆ ಸೂಕ್ತ ಪರಿಹಾರ ನೀಡದಿದ್ದರೆ, ಕುಕಿ-ಝೋ ಕೌನ್ಸಿಲ್ ತನ್ನ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಹೆನ್ಲಿಯೆನ್ ಥಾಂಗ್ ಥಾಂಗ್ಲೆಟ್ ಚೂರಚಂದ್ ಪುರ್ ನಲ್ಲಿ ಎಚ್ಚರಿಸಿದ್ದಾರೆ.
ಮಂಗಳವಾರ ಕುಕಿ-ಝೋ ಮಹಿಳೆಯರ ನೇತೃತ್ವದ ಗುಂಪು ಹಾಗೂ ಭದ್ರತಾ ಪಡೆಗಳ ನಡುವೆ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಘರ್ಷಣೆ ನಡೆದಿದ್ದರಿಂದ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದಲ್ಲಿ ಮತ್ತೊಮ್ಮೆ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.