ʼಲಾಡ್ಕಿ ಬಹೀಣʼ ಯೋಜನೆಯ ಫಲಾನುಭವಿಗಳ ಪಟ್ಟಿ ಮೊಟಕುಗೊಳಿಸಲು ಮಹಾರಾಷ್ಟ್ರ ಸಜ್ಜು
ಮುಂಬೈ: ಮಹಾರಾಷ್ಟ್ರ ಸರಕಾರವು ಮುಖ್ಯಮಂತ್ರಿ ʼಮಾಝಿ ಲಾಡ್ಕಿ ಬಹೀಣʼ ಯೋಜನೆಯ 2.63 ಕೋಟಿ ಫಲಾನುಭವಿಗಳ ಪಟ್ಟಿಯನ್ನು ಪುನರ್‌ಪರಿಶೀಲಿಸಲು ಮತ್ತು ಇತರ ಕಲ್ಯಾಣ ಯೋಜನೆಗಳಡಿ ಲಾಭಗಳನ್ನು ಪಡೆಯುತ್ತಿರುವವರನ್ನು ಪಟ್ಟಿಯಿಂದ ಕೈಬಿಡಲು ನಿರ್ಧರಿಸಿದೆ ಎಂದು newindianexpress.com ವರದಿ ಮಾಡಿದೆ.
ಹಿಂದಿನ ಏಕನಾಥ ಶಿಂದೆ ನೇತೃತ್ವದ ಸರಕಾರವು ಕಳೆದ ವರ್ಷದ ಆಗಸ್ಟ್‌ನಲ್ಲಿ ಆರಂಭಿಸಿದ್ದ ಲಾಡ್ಕಿ ಬಹೀಣ ಯೋಜನೆಯಡಿ ಅರ್ಹ ಮಹಿಳೆಯರಿಗೆ ಮಾಸಿಕ 1,500 ರೂ.ಗಳ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಮಹಾಯುತಿ ಮೈತ್ರಿಕೂಟವು ತಾನು ಅಧಿಕಾರಕ್ಕೆ ಮರಳಿದರೆ ಈ ಮೊತ್ತವನ್ನು 2,100 ರೂ.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿತ್ತು.
ನ.20ರಂದು ನಡೆದಿದ್ದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿಯ ಭರ್ಜರಿ ಗೆಲುವಿನಲ್ಲಿ ಈ ಯೋಜನೆಯು ಪ್ರಮುಖ ಪಾತ್ರವನ್ನು ವಹಿಸಿತ್ತು.
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಕಾರ ಲಾಡ್ಕಿ ಬಹೀಣ ಯೋಜನೆಯ 20 ಲಕ್ಷಕ್ಕೂ ಅಧಿಕ ಫಲಾನುಭವಿಗಳು ಈಗಾಗಲೇ ಇತರ ಯೋಜನೆಗಳಡಿ ಲಾಭಗಳನ್ನು ಪಡೆಯುತ್ತಿರುವುದರಿಂದ ಅವರನ್ನು ಪಟ್ಟಿಯಿಂದ ಕೈ ಬಿಡುವ ಸಾಧ್ಯತೆಯಿದೆ.
‘ಈ ಫಲಾನುಭವಿಗಳನ್ನು ನಮೋ ಶೇತ್ಕರಿ ಮತ್ತು ನೇರ ಪ್ರಯೋಜನಗಳ ಯೋಜನೆಗಳಡಿಯೂ ಪಟ್ಟಿ ಮಾಡಲಾಗಿದೆ. ಈ ಫಲಾನುಭವಿಗಳನ್ನು ಕೈಬಿಡಲು ಮತ್ತು ನಿಜವಾಗಿಯೂ ಅರ್ಹರಿಗೆ ಯೋಜನೆಯ ಲಾಭಗಳನ್ನು ನೀಡಲು ನಾವು ನಿರ್ಧರಿಸಿದ್ದೇವೆ. ಯಾವುದೇ ಯೋಜನೆಯಡಿ ಮೊತ್ತವು ಮಹಿಳೆಯು ಲಾಡ್ಕಿ ಬಹೀಣ ಯೋಜನೆಯಡಿ ಪಡೆಯುತ್ತಿರುವ ಮೊತ್ತಕ್ಕಿಂತ ಕಡಿಮೆಯಿದ್ದರೆ ಹೆಚ್ಚುವರಿ ಹಣವನ್ನು ನೀಡುವ ಮೂಲಕ ವ್ಯತ್ಯಾಸವನ್ನು ಸರಿದೂಗಿಸಲಾಗುವುದು. ಮೊತ್ತವು ಲಾಡ್ಕಿ ಬಹೀಣ ಯೋಜನೆಗಿಂತ ಹೆಚ್ಚಿದ್ದರೆ ಅಂತಹವರನ್ನು ಈ ಯೋಜನೆಯಿಂದ ಕೈಬಿಡಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅದಿತಿ ತತ್ಕರೆ ಸುದ್ದಿಸಂಸ್ಥೆಗೆ ತಿಳಿಸಿದರು.
ಕುಟುಂಬದ ಒಟ್ಟು ವಾರ್ಷಿಕ ಆದಾಯ 2.50 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೆ ಅಂತಹವರನ್ನೂ ಪಟ್ಟಿಯಿಂದ ಕೈಬಿಡಲು ಮಹಾಯುತಿ ಸರಕಾರವು ನಿರ್ಧರಿಸಿದೆ. ಅರ್ಹ ಫಲಾನುಭವಿಗಳನ್ನು ಲಾಡ್ಕಿ ಬಹೀಣ ಯೋಜನೆಯಿಂದ ಕೈಬಿಡಲಾಗುವುದಿಲ್ಲ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರು ಸ್ಪಷ್ಟಪಡಿಸಿದರು.
ಚುನಾವಣೆಗೆ ಮುನ್ನ ಲಾಡ್ಕಿ ಬಹೀಣ ಯೋಜನೆಯನ್ನು ಆರಂಭಿಸಿದ್ದಕ್ಕಾಗಿ ಮತ್ತು ಅಧಿಕಾರಕ್ಕೆ ಮರಳಿದ ಬಳಿಕ ಫಲಾನುಭವಿಗಳ ಪಟ್ಟಿಯನ್ನು ಮೊಟಕುಗೊಳಿಸುತ್ತಿರುವುದಕ್ಕಾಗಿ ಮಹಾಯುತಿ ಸರಕಾರವನ್ನು ಪ್ರತಿಪಕ್ಷಗಳು ಟೀಕಿಸಿವೆ.