ಬಿಹಾರ | ವ್ಯಕ್ತಿಯೊಬ್ಬನನ್ನು ಬಂಧಿಸಲು ಹೋಗಿ, ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಪೊಲೀಸರ ಘರ್ಷಣೆ!
ದರ್ಭಾಂಗ: ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಲು ಹೋದ ಪೊಲೀಸರು, ಆತನ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ತೀವ್ರ ಘರ್ಷಣೆ ನಡೆಸಿರುವ ಘಟನೆ ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ನಡೆದಿದೆ.
ವರದಕ್ಷಿಣೆ ಕಿರುಕುಳ ಆರೋಪಕ್ಕೆ ಗುರಿಯಾಗಿದ್ದ ಜಿತೇಂದ್ರ ಯಾದವ್ ಎಂಬ ಆರೋಪಿಯನ್ನು ಬಂಧಿಸಲು ಲಹರಿಯಸರಾಯಿ ಪ್ರದೇಶಕ್ಕೆ ಪೊಲೀಸರು ತೆರಳಿದಾಗ, ಆತನ ಕುಟುಂಬದ ಸದಸ್ಯರು ಆತನನ್ನು ಪೊಲೀಸರ ಬಂಧನದಿಂದ ಬಿಡುಗಡೆಗೊಳಿಸಲು ಮುಂದಾದಾಗ ಈ ಘರ್ಷಣೆ ನಡೆದಿದೆ ಎಂದು ವರದಿಯಾಗಿದೆ.
ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ದೊಡ್ಡ ಸಂಖ್ಯೆ ಗುಂಪೊಂದು ಪೊಲೀಸರತ್ತ ಕಲ್ಲು ತೂರಾಟ ನಡೆಸುತ್ತಾ, ಅವರಿಂದ ಗನ್ ಗಳನ್ನು ಕಿತ್ತುಕೊಳ್ಳಲು ಯತ್ನಿಸುತ್ತಿರುವುದು ಸೆರೆಯಾಗಿದೆ. ಅಲ್ಲದೆ, ಮುಖ್ಯ ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚುವ ಮೂಲಕ ರಸ್ತೆ ತಡೆ ನಡೆಸಿರುವ ಗುಂಪು, ಪೊಲೀಸರು ಆರೋಪಿಯ ಮನೆಯತ್ತ ತೆರಳದಂತೆ ತಡೆಯಲು ಪ್ರಯತ್ನಿಸಿರುವುದೂ ವಿಡಿಯೊದಲ್ಲಿ ದಾಖಲಾಗಿದೆ.
ಈ ಘಟನೆಯಲ್ಲಿ ಇಬ್ಬರು ಸಬ್ ಇನ್ಸ್ ಪೆಕ್ಟರ್ ಗಳು ಹಾಗೂ ಓರ್ವ ಪೊಲೀಸ್ ಪೇದೆ ಸೇರಿದಂತೆ ಮೂವರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಅವರನ್ನೆಲ್ಲ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆಯ ಸಂಬಂಧ, ಬಂಧನದ ವಾರೆಂಟ್ ಜಾರಿಯಾಗಿದ್ದ ಆರೋಪಿಯೂ ಸೇರಿದಂತೆ, ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.