ಸಂಘರ್ಷ ಪೀಡಿತ ಮಣಿಪುರದಲ್ಲಿ ಇಂಟರ್ ನೆಟ್ ಸ್ಥಗಿತದ ವೇಳೆ ಸ್ಟಾರ್‌ ಲಿಂಕ್ ಇಂಟರ್ ನೆಟ್ ಬಳಕೆ: ವರದಿ

Update: 2025-01-05 11:29 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಸಂಘರ್ಷ ಪೀಡಿತ ಮಣಿಪುರದಲ್ಲಿ ಸರಕಾರ ಇಂಟರ್ ನೆಟ್ ಸೇವೆಗಳನ್ನು ಬಂದ್ ಮಾಡಿದ್ದರೂ, ಇಂಟರ್‌ ನೆಟ್ ಸ್ಥಗಿತವನ್ನು ತಪ್ಪಿಸಲು ಬಂಡುಕೋರರು ಸ್ಟಾರ್ ಲಿಂಕ್ ಉಪಗ್ರಹಗಳನ್ನು ಬಳಸಿದ್ದಾರೆ ಎಂದು The Guardian ವರದಿ ತಿಳಿಸಿದ್ದು, ಈ ಕುರಿತ ಆರೋಪವನ್ನು ಎಲಾನ್ ಮಸ್ಕ್ ತಳ್ಳಿ ಹಾಕಿದ್ದಾರೆ.

ಸಶಸ್ತ್ರದಾರಿ ಗುಂಪುಗಳು ಮತ್ತು ರಾಜ್ಯ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ʼದಿ ಗಾರ್ಡಿಯನ್ʼ ವರದಿ ಮಾಡಿದ್ದು, ಮಣಿಪುರದಲ್ಲಿ ಇಂಟರ್ ನೆಟ್ ಸೇವೆ ಬಂದ್ ವೇಳೆ ಸ್ಟಾರ್ ಲಿಂಕ್ ಇಂಟರ್ ನೆಟ್ ಮಣಿಪುರದ ಹಲವಾರು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಇಂಟರ್ ನೆಟ್ ಬಂದ್ ಮಾಡಿದ ವೇಳೆ ಬಂಡುಕೋರರ ಗುಂಪು ಸೇರಿದಂತೆ ಕೆಲವರು ಇದನ್ನು ಬಳಸಿದ್ದಾರೆ ಎಂದು ತಿಳಿಸಿದೆ.

ರಾಜ್ಯದಲ್ಲಿ ಇಂಟರ್ ನೆಟ್ ಸ್ಥಗಿತಗೊಂಡಾಗ ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ ಸ್ಟಾರ್ ಲಿಂಕ್ ಅನ್ನು ಬಳಸಿದೆ ಎಂದು ವ್ಯಕ್ತಿಯೋರ್ವರು ಹೇಳಿದ್ದಾರೆ. ನೆರೆಯ ಮ್ಯಾನ್ಮಾರ್ ನಲ್ಲಿ ಸ್ಟಾರ್‌ ಲಿಂಕ್ ಇಂಟರ್ನೆಟ್ ಕಾರ್ಯನಿರ್ವಹಿಸುವುದನ್ನು ಗಮನಿಸಿ ಮಣಿಪುರದ ಪೀಪಲ್ಸ್ ಲಿಬರೇಶನ್ ಆರ್ಮಿ ಸದಸ್ಯರು ಮಣಿಪುರದ ಕೆಲ ಭಾಗದಲ್ಲಿ ಕೂಡ ಸ್ಟಾರ್ ಲಿಂಕ್ ಬಳಸಲು ಯತ್ನಿಸಿದ್ದು, ಇದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯು ಹೇಳಿದೆ.

ನಾಗರಿಕರು ಮತ್ತು ಬಂಡುಕೋರರ ಗುಂಪುಗಳು ಸ್ಟಾರ್ ಲಿಂಕ್ ಇಂಟರ್‌ ನೆಟ್ ಅನ್ನು ಬಳಸುವ ಬಗ್ಗೆ ವರದಿಗಳನ್ನು ಸ್ವೀಕರಿಸಿದ್ದೇವೆ ಎಂದು ಮಣಿಪುರದ ಭದ್ರತಾ ಏಜೆನ್ಸಿಗಳ ಮೂಲಗಳು ಹೇಳಿಕೊಂಡಿದೆ. ನಮ್ಮ ಆರಂಭಿಕ ಮಾಹಿತಿಯು ಮಣಿಪುರದ ಕೆಲವು ಪ್ರದೇಶಗಳಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಮ್ಯಾನ್ಮಾರ್ ಗಡಿಗೆ ಹತ್ತಿರವಿರುವ ಕೆಲವು ಪ್ರದೇಶಗಳಲ್ಲಿ ಸ್ಟಾರ್‌ ಲಿಂಕ್‌ ಕಾರ್ಯನಿರ್ವಹಿಸುತ್ತದೆ ಎಂದು ಸೂಚಿಸುತ್ತದೆ ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ʼದಿ ಗಾರ್ಡಿಯನ್ʼ ವರದಿ ಮಾಡಿದೆ.

ಇಂಫಾಲ್ ನಲ್ಲಿ ನೆಲೆಸಿರುವ ವ್ಯಕ್ತಿಯೋರ್ವ ಸ್ಟಾರ್ ಲಿಂಕ್ ಇಂಟರ್ ನೆಟ್ ಬಳಸಿದ್ದನ್ನು ನೋಡಿರುವುದಾಗಿ ಮತ್ತೋರ್ವ ವ್ಯಕ್ತಿ ತಿಳಿಸಿದ್ದಾನೆ ಎಂದು ದಿ ಗಾರ್ಡಿಯನ್ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಎಲಾನ್ ಮಸ್ಕ್ ಈ ಬಗೆಗಿನ ಹೇಳಿಕೆಯನ್ನು ಸುಳ್ಳು ಎಂದು ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News