ಒಡಿಶಾ | ಮೇಕೆ ಕಳ್ಳತನದ ಶಂಕೆಯಲ್ಲಿ ಇಬ್ಬರು ದಲಿತ ಯುವಕರಿಗೆ ಚಪ್ಪಲಿ ಹಾರ ಹಾಕಿ ಥಳಿತ
ಭುವನೇಶ್ವರ್ : ಒಡಿಶಾದ ಜಗತ್ ಸಿಂಗ್ ಪುರ ಜಿಲ್ಲೆಯಲ್ಲಿ ಮೇಕೆ ಕಳ್ಳತನದ ಶಂಕೆಯಲ್ಲಿ ಇಬ್ಬರು ದಲಿತ ಯುವಕರಿಗೆ ಚಪ್ಪಲಿ ಹಾರ ಹಾಕಿ ಥಳಿಸಿದ್ದು, ಈ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಜಗತ್ ಸಿಂಗ್ ಪುರ ಜಿಲ್ಲೆಯ ಬಿರಿಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 27ರಂದು ಈ ಘಟನೆ ನಡೆದಿದ್ದು, ಘಟನೆಯ ವೀಡಿಯೊವನ್ನು ಒಡಿಶಾದ ಕಾಂಗ್ರೆಸ್ ನಾಯಕ ಅಮಿಯಾ ಪಾಂಡವ್ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.
ಇಬ್ಬರು ಯುವಕರು ಆಟೋ ರಿಕ್ಷಾದಲ್ಲಿ ಎರಡು ಮೇಕೆಗಳನ್ನು ಸಾಗಿಸುತ್ತಿದ್ದಾಗ ಸ್ಥಳೀಯರು ಅವರನ್ನು ಹಿಂಬಾಲಿಸಿದ್ದಾರೆ. ನಂತರ ಅವರನ್ನು ಪೊಲೀಸರು ರಕ್ಷಿಸಿದ್ದು, ಕಳ್ಳತನದ ಆರೋಪದಲ್ಲಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಬಳಿಕ ಇಬ್ಬರನ್ನು ಕೂಡ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ದಲಿತ ಯುವಕರಿಬ್ಬರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 7 ಮಂದಿ ಆರೋಪಿಗಳ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳ ಜೊತೆಗೆ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತು ಜನವರಿ 1ರಂದು ಸಂತ್ರಸ್ತನೋರ್ವನ ತಂದೆ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಮತ್ತು ಆತನ ಸ್ನೇಹಿತ ಸಿಮದಾಳ ಗ್ರಾಮದಿಂದ ಹಿಂದಿರುಗುತ್ತಿದ್ದಾಗ ಬರೇಡಿಯಾ ಸೇತುವೆಯ ಬಳಿ ಕೆಲವರು ತಡೆದು ಹೆಸರು ಮತ್ತು ಸ್ಥಳಗಳ ಬಗ್ಗೆ ಕೇಳಿದ್ದಾರೆ. ಮಗ ಹೆಸರು ಹೇಳುತ್ತಿದ್ದಂತೆ ಅವರು ಜಾತಿ ನಿಂದನೆ ಮಾಡಿದ್ದಲ್ಲದೆ ಮೇಕೆ ಕಳ್ಳತನದ ಆರೋಪ ಮಾಡಿ ಥಳಿಸಿದ್ದಾರೆ. ಬಳಿಕ ಮಗನ ಬಳಿಯಿದ್ದ ಬೆಳ್ಳಿಯ ಸರವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಗತ್ ಸಿಂಗ್ ಪುರ ಪೊಲೀಸ್ ವರಿಷ್ಠಾಧಿಕಾರಿ ಭವಾನಿ ಶಂಕರ್, ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಕ್ರಮವನ್ನು ಕೈಗೊಳ್ಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.