ಪತ್ನಿಯ ಕಿರುಕುಳ ಆರೋಪ: ಆಕೆಗೆ ಪಾಠ ಕಲಿಸಿ ಎಂದು ಕುಟುಂಬದ ಸದಸ್ಯರಿಗೆ ವಿಡಿಯೊ ಕಳುಹಿಸಿ ಪತಿ ಆತ್ಮಹತ್ಯೆ
ರಾಜ್ ಕೋಟ್: ಪತ್ನಿಯ ಮಾನಸಿಕ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಶನಿವಾರ ಮಹಿಳೆಯೊಬ್ಬರನ್ನು ಬೊಟಾಡ್ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನ್ನ ಪತ್ನಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ಆರೋಪಿಸಿರುವ ಮೃತ ವ್ಯಕ್ತಿ, ಆಕೆಗೆ ಪಾಠ ಕಲಿಸಿ ಎಂದು ಕುಟುಂಬದ ಸದಸ್ಯರಿಗೆ ಮನವಿ ಮಾಡಿರುವ ವಿಡಿಯೊವನ್ನು ಆತ್ಮಹತ್ಯೆಗೂ ಮುನ್ನ ಚಿತ್ರೀಕರಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಮಹಿಳೆ ಜಯ ಸತಾಡಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಸುರೇಶ್ ಸತಾಡಿಯ (39) ಎಂದು ಗುರುತಿಸಲಾಗಿದ್ದು, ಡಿಸೆಂಬರ್ 30ರಂದು ಬೊಟಾಡ್ ಜಿಲ್ಲೆಯ ಝಮರ್ಲಾ ಗ್ರಾಮದ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಮ್ಮ ಮೃತ ಪುತ್ರನ ಮೊಬೈಲ್ ನಲ್ಲಿ ಆತನ ವಿಡಿಯೊ ಪತ್ತೆಯಾದ ನಂತರ, ಸುರೇಶ್ ತಂದೆ ಬಾಬು ಸತಾಡಿಯ ತಮ್ಮ ಸೊಸೆ ಜಯಾ ಸತಾಡಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಸುರೇಶ್ ಖಿನ್ನರಾಗಿರುವುದು ಹಾಗೂ ಅಳುತ್ತಿರುವುದು ಕಂಡು ಬಂದಿದ್ದು, ತಮ್ಮ ಪತ್ನಿ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿರುವುದೂ ಸೆರೆಯಾಗಿದೆ. “ಆಕೆ ತನ್ನ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವಂತಹ ಪಾಠವನ್ನು ಕಲಿಸಿ. ಆಕೆ ನನ್ನವಳೂ ಆಗಿರಲಿಲ್ಲ. ಆಕೆ ನನಗೆ ವಂಚಿಸಿದಳು ಹಾಗೂ ನನ್ನನ್ನು ಸಾಯುವ ಅನಿವಾರ್ಯತೆಗೆ ದೂಡಿದಳು” ಎಂದೂ ಸುರೇಶ್ ಆ ವಿಡಿಯೊದಲ್ಲಿ ಅಳಲು ತೋಡಿಕೊಂಡಿರುವುದು ಕಂಡು ಬಂದಿದೆ.
ಸುರೇಶ್ ಮತ್ತು ಜಯಾ ದಂಪತಿಗಳು 17 ವರ್ಷಗಳ ಹಿಂದೆ ವಿವಾಹವಾಗಿದ್ದು, ಅವರಿಗೆ ನಾಲ್ವರು ಮಕ್ಕಳಿದ್ದಾರೆ. ಈ ಪೈಕಿ 15 ಮತ್ತು 10 ವರ್ಷದ ಪುತ್ರಿಯರು ಹಾಗೂ 6 ಮತ್ತು ನಾಲ್ಕು ವರ್ಷದ ಪುತ್ರರು ಸೇರಿದ್ದಾರೆ.