ಕಡಿಮೆ ಗೋಚರತೆ | ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುಮಾರು 60 ವಿಮಾನಗಳ ಸಂಚಾರ ವಿಳಂಬ

Update: 2025-01-06 15:25 GMT

ಸಾಂದರ್ಭಿಕ ಚಿತ್ರ | PTI 

ಕೋಲ್ಕತಾ: ಕಡಿಮೆ ಗೋಚರತೆಯ ಕಾರಣದಿಂದ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುಮಾರು 60 ವಿಮಾನಗಳು ವಿಳಂಬವಾಗಿ ಸಂಚರಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟ ಮಂಜಿನ ಕಾರಣದಿಂದ ಕಡಿಮೆ ಗೋಚರತೆಯ ಕಾರ್ಯ ವಿಧಾನ (ಎಲ್ವಿಪಿ)ವನ್ನು ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 7 ಗಂಟೆಯಿಂದ ಜಾರಿಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಳಗ್ಗೆ 7.10ರಿಂದ ಬೆಳಗ್ಗೆ 9 ಗಂಟೆ ವರೆಗೆ ವಿಮಾನಗಳ ಯಾವುದೇ ರೀತಿಯ ಸಂಚಾರ ನಡೆಯಲಿಲ್ಲ. ಅಲ್ಲದೆ, ಸುಮಾರು 30 ಆಗಮನ ಹಾಗೂ 30 ನಿರ್ಗಮನ ವಿಮಾನಗಳು ವಿಳಂಬವಾಗಿ ಸಂಚರಿಸಿದವು ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಪ್ರವತ್ ರಜನ್ ಬೆರಿಯಾ ತಿಳಿಸಿದ್ದಾರೆ.

ಇದಲ್ಲದೆ, ಕೋಲ್ಕತ್ತಾಕ್ಕೆ ಆಗಮಿಸುತ್ತಿದ್ದ 5 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ಪಥ ಬದಲಾಯಿಸಲಾಯಿತು. ಬೆಳಗ್ಗೆ 9 ಗಂಟೆಯ ಬಳಿಕ ಗೋಚರತೆಯ ಪರಿಸ್ಥಿತಿ ಸುಧಾರಿಸಿತು. ದುಬೈಯಿಂದ ಕೋಲ್ಕತ್ತಾಕ್ಕೆ ಸಂಚರಿಸುವ ಎಮಿರೇಟ್ಸ್ನ ವಿಮಾನ ಇಲ್ಲಿನ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಇದು ಇಲ್ಲಿಗೆ ಆಗಮಿಸಿದ ಮೊದಲ ವಿಮಾನ. ಅದು ಬೆಳಗ್ಗೆ 9.04ಕ್ಕೆ ಇಲ್ಲಿ ಇಳಿಯಿತು ಎಂದು ಅವರು ತಿಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News