ಮಹಾರಾಷ್ಟ್ರ | ಗ್ರಾಮಸ್ಥರಿಗೆ ಭೂಸ್ವಾಧೀನ ಪರಿಹಾರ ನೀಡದ ಪ್ರಾಧಿಕಾರಗಳನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಗ್ರಾಮಸ್ಥರಿಗೆ ಭೂಸ್ವಾಧೀನ ಪರಿಹಾರ ನೀಡದ ಮಹಾರಾಷ್ಟ್ರ ಪ್ರಾಧಿಕಾರಗಳನ್ನು ಸೋಮವಾರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಜನವರಿ 31ರೊಳಗೆ ಗ್ರಾಮಸ್ಥರಿಗೆ ಪರಿಹಾರ ವಿತರಿಸಬೇಕು ಇಲ್ಲವೆ ನ್ಯಾಯಾಂಗ ನಿಂದನೆ ಕ್ರಮವನ್ನು ಎದುರಿಸಬೇಕು ಎಂದು ಮಹಾರಾಷ್ಟ್ರ ಸರಕಾರದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದೆ.
2005ರಲ್ಲಿ ಕಾರ್ಮಿಕರ ಖಾತ್ರಿ ಯೋಜನೆಯಡಿ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿನ ಜಂಭಾಲ್ ಕೋರಿಯ ಬೋರ್ಫಾಡಿಯಲ್ಲಿ ನೀರಿನ ಟ್ಯಾಂಕ್ ನಿರ್ಮಾಣಕ್ಕಾಗಿ ನಡೆಸಿದ್ದ ಗ್ರಾಮಸ್ಥರ ಭೂಸ್ವಾಧೀನ ಪ್ರಕರಣದ ವಿಚಾರಣೆಯನ್ನು ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠ ನಡೆಸಿತು.
“ಗ್ರಾಮಸ್ಥರ ಭೂಮಿಗಳನ್ನು ಕಡ್ಡಾಯವಾಗಿ ವಶಪಡಿಸಿಕೊಂಡು, ಅವರಿಗೆ ಪರಿಹಾರ ವಿತರಿಸದಿರುವ ಮಹಾರಾಷ್ಟ್ರ ಸರಕಾರದ ಅತ್ಯುತ್ತಮ ನಿದರ್ಶನ ಇದಾಗಿದೆ” ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ಭೂಮಿ ಕಳೆದುಕೊಂಡಿರುವ ಗ್ರಾಮಸ್ಥರಿಗೆ 149 ಕೋಟಿ ರೂ. ಪರಿಹಾರ ನೀಡುವ ಆದೇಶ ಅಂತಿಮಗೊಂಡಿದ್ದರೂ, ಅವರಿಗಿನ್ನೂ ಪರಿಹಾರ ವಿತರಣೆ ಮಾಡದಿರುವ ವಿಚಾರ ವಿಚಾರಣೆಯ ಸಂದರ್ಭದಲ್ಲಿ ದಾಖಲಾಯಿತು.
“ಈ ಪ್ರಕರಣದಲ್ಲಿ ರಾಜ್ಯ ಪ್ರಾಧಿಕಾರಗಳು ವರ್ತಿಸಿರುವ ರೀತಿಯಿಂದ ನಾವು ಸಂಪೂರ್ಣವಾಗಿ ಅಸಮಾಧಾನಗೊಂಡಿದ್ದೇವೆ” ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿತು. ಈ ವಿಚಾರದಲ್ಲಿ ನಾವು ಮೃದು ಧೋರಣೆಯನ್ನು ಅಳವಡಿಸಿಕೊಂಡಿದ್ದು, ನಾವು ಬೀಡ್ ಜಿಲ್ಲೆಯ ಜಿಲ್ಲಾ ಪರಿಷತ್ ಸಲ್ಲಿಸಿರುವ ಅರ್ಜಿಯನ್ನು ಆಧರಿಸಿ ನೋಟಿಸ್ ಜಾರಿಗೊಳಿಸಿಲ್ಲ ಅಥವಾ ತಪ್ಪೆಸಗಿರುವ ಅಧಿಕಾರಿಗಳ ವಿಚಾರಣೆ ನಡೆಸುತ್ತಿಲ್ಲ ಎಂದು ಹೇಳಿದ ಸುಪ್ರೀಂ ಕೋರ್ಟ್, ಈ ವಿಚಾರದ ಕುರಿತು ಮತ್ತಷ್ಟು ಪ್ರತಿಕ್ರಿಯಿಸದಿರಲು ನಿರ್ಧರಿಸಿತು.
ಆದರೆ, ಮಹಾರಾಷ್ಟ್ರ ಸರಕಾರಕ್ಕೆ ಸರಣಿ ನಿರ್ದೇಶನಗಳನ್ನು ನೀಡಿದ ಸುಪ್ರೀಂ ಕೋರ್ಟ್, ಈ ವಿಚಾರವನ್ನು ಇನ್ನು ಒಂದು ವಾರದೊಳಗಾಗಿ ಗಂಭೀರವಾಗಿ ಪರಿಗಣಿಸಬೇಕು ಎಂದು ಮಹಾರಾಷ್ಟ್ರ ಸರಕಾರದ ಮುಖ್ಯ ಕಾರ್ಯದರ್ಶಿ, ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪಂಚಾಯತಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿತು.