ಗುಜರಾತ್ | ಕೊಳವೆ ಬಾವಿಗೆ ಬಿದ್ದ 18 ವರ್ಷದ ಬಾಲಕಿ!
ಕಛ್ : ಗುಜರಾತ್ನ ಕಛ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸೋಮವಾರ ಬೆಳಗ್ಗೆ 18 ವರ್ಷದ ಬಾಲಕಿಯೊಬ್ಬರು 540 ಅಡಿ ಆಳದ ಕೊಳವೆ ಬಾವಿಯೊಂದಕ್ಕೆ ಬಿದ್ದಿದ್ದಾರೆ ಎಂದು ಭುಜ್ ಜಿಲ್ಲಾಧಿಕಾರಿ ಎ.ಬಿ. ಜಾದವ್ ತಿಳಿಸಿದ್ದಾರೆ. ಬಾಲಕಿ ಈಗ 490 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಬಾಲಕಿಯು ರಾಜಸ್ಥಾನದ ವಲಸೆ ಕಾರ್ಮಿಕರ ಕುಟುಂಬವೊಂದಕ್ಕೆ ಸೇರಿದವರಾಗಿದ್ದಾರೆ.
ಆರಂಭದಲ್ಲಿ, 18 ವರ್ಷದ ತರುಣಿಯೊಬ್ಬರು ಕೊಳವೆ ಬಾವಿಗೆ ಬಿದ್ದಿರುವುದನ್ನು ನಂಬಲು ಅಧಿಕಾರಿಗಳು ಸಿದ್ಧರಿರಲಿಲ್ಲ. ಬಳಿಕ, ಅಧಿಕಾರಿಗಳು ಕ್ಯಾಮರಾ ಬಳಸಿ ತಪಾಸಣೆ ಮಾಡಿದ್ದು, ಕೊಳವೆ ಬಾವಿಯೊಳಗೆ ಬಾಲಕಿಯ ಇರುವಿಕೆ ಪತ್ತೆಯಾಯಿತು.
‘‘ಬಾಲಕಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ. ಸ್ಥಳೀಯ ರಕ್ಷಣಾ ತಂಡವೊಂದು ಕೊಳವೆ ಬಾವಿಯ ಒಳಗೆ ಆಮ್ಲಜನಕವನ್ನು ಹಾಯಿಸುತ್ತಿದೆ. ಆಕೆಯನ್ನು ಹೊರಗೆ ಎಳೆಯುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ’’ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಬಾಲಕಿಯು ಬೆಳಗ್ಗೆ ಸುಮಾರು 6:30ಕ್ಕೆ ಕೊಳವೆ ಬಾವಿಗೆ ಬಿದ್ದಿದ್ದಾಳೆ ಎನ್ನಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಗಡಿ ಭದ್ರತಾ ಪಡೆ (ಬಿಎಸ್ಎಫ್)ಯನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಿಗಾಗಿ ಸ್ಥಳಕ್ಕೆ ಕರೆಸಲಾಗಿದೆ.