ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ಎರಡು ವಿಶೇಷ ವರ್ಗಗಳ ವೀಸಾಗಳನ್ನು ಪ್ರಕಟಿಸಿದ ಕೇಂದ್ರ ಸರಕಾರ

Update: 2025-01-05 10:57 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗಾಗಿ ‘ಇ-ಸ್ಟುಡೆಂಟ್ ವೀಸಾ’ ಮತ್ತು ‘ಇ-ಸ್ಟುಡೆಂಟ್-x-ವೀಸಾ’ ಹೀಗೆ ಎರಡು ವಿಶೇಷ ವರ್ಗಗಳ ವೀಸಾಗಳನ್ನು ಕೇಂದ್ರ ಸರಕಾರವು ಪ್ರಕಟಿಸಿದೆ.

ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್‌ಎ)ವು ಆರಂಭಿಸಿರುವ ಈ ವೀಸಾಗಳಿಗಾಗಿ ಅರ್ಜಿದಾರರು ಸರಕಾರದ ‘ಸ್ಟಡಿ ಇನ್ ಇಂಡಿಯಾ(ಎಸ್‌ಐಐ)’ ಪೋರ್ಟಲ್‌ನ್ನು ಬಳಸಬೇಕಾಗುತ್ತದೆ.

ಎಸ್‌ಐಐ ಪೋರ್ಟಲ್‌ನಲ್ಲಿ ನೋಂದಾಯಿತ ಅರ್ಹ ವಿದೇಶಿ ವಿದ್ಯಾರ್ಥಿಗಳಿಗೆ ‘ಇ-ಸ್ಟುಡೆಂಟ್ ವೀಸಾ’ ಲಭ್ಯವಿದ್ದರೆ ‘ಇ-ಸ್ಟುಡೆಂಟ್-x-ವೀಸಾ’ವನ್ನು ‘ಇ-ಸ್ಟುಡೆಂಟ್ ವೀಸಾ’ ಹೊಂದಿರುವವರ ಅವಲಂಬಿತರಿಗೆ ನೀಡಲು ಉದ್ದೇಶಿಸಲಾಗಿದೆ.

ಎಸ್‌ಐಐ ಪೋರ್ಟಲ್ ಭಾರತದಲ್ಲಿ ದೀರ್ಘಾವಧಿಯ ಅಥವಾ ಅಲ್ಪಾವಧಿಯ ಕೋರ್ಸ್‌ಗಳಿಗೆ ಸೇರಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು https://indianvisaonline.gov.in/ನಲ್ಲಿ ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ,ಆದರೆ ಅವರ ಅರ್ಜಿಗಳ ಸತ್ಯಾಸತ್ಯತೆಯನ್ನು ಎಸ್‌ಐಐ ಐಡಿಯನ್ನು ಬಳಸಿ ಪರಿಶೀಲಿಸಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಎಸ್‌ಐಐ ವೆಬ್‌ಸೈಟ್ ಮೂಲಕ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.

ವಿದ್ಯಾರ್ಥಿಗಳು ತಮ್ಮ ಹೆಸರು,ದೇಶ,ಜನ್ಮದಿನಾಂಕ,ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸಗಳಂತಹ ಪ್ರಾಥಮಿಕ ಮಾಹಿತಿಗಳನ್ನು ನಮೂದಿಸುವ ಮೂಲಕ ಎಸ್‌ಐಐ ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಬಹುದು.

ಎಸ್‌ಐಐ ಮೂಲಕ ಭಾರತದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಬಯಸುವ ಪ್ರತಿ ವಿದ್ಯಾರ್ಥಿಯು ವಿಶಿಷ್ಟವಾದ ಎಸ್‌ಐಐ ಐಡಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಐಡಿ ವಿದ್ಯಾರ್ಥಿಗಳಿಗೆ ತಮ್ಮ ಡ್ಯಾಷ್‌ಬೋರ್ಡ್ ಪ್ರವೇಶಿಸಲು,ತಮ್ಮ ಕಾಲೇಜು ಮತ್ತು ಕೋರ್ಸ್‌ಗಳ ಅರ್ಜಿಗಳ ಸ್ಥಿತಿಗತಿಯನ್ನು ಕಂಡುಕೊಳ್ಳಲು,ವೀಸಾ ಪ್ರಕ್ರಿಯೆ ಮತ್ತು ಇತರ ಸಂಬಂಧಿತ ಪ್ರಕ್ರಿಯೆಗಳಿಗೆ ಅನುಮತಿಸುತ್ತದೆ. ಎಸ್‌ಐಐ ಐಡಿ ಇಲ್ಲದೆ ವಿದ್ಯಾರ್ಥಿಗಳು ಭಾರತದಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸುವುದು ಸಾಧ್ಯವಿಲ್ಲ.

ಎಸ್‌ಐಐ ಪೋರ್ಟಲ್‌ನಲ್ಲಿ ಪಟ್ಟಿ ಮಾಡಲಾದ ಪಾಲುದಾರ ಶಿಕ್ಷಣ ಸಂಸ್ಥೆಗಳ ಪೈಕಿ ಒಂದರಿಂದ ಪ್ರವೇಶ ಪ್ರಸ್ತಾವವನ್ನು ಸ್ವೀಕರಿಸಿದ ಬಳಿಕ ವಿದ್ಯಾರ್ಥಿಗಳು ವೀಸಾಕ್ಕಾಗಿ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿ ವೀಸಾಗಳನ್ನು ಕೋರ್ಸ್‌ನ ಅವಧಿಯನ್ನು ಅವಲಂಬಿಸಿ ಐದು ವರ್ಷಗಳವರೆಗೆ ನೀಡಲಾಗುತ್ತದೆ. ವಿದ್ಯಾರ್ಥಿಗಳು ಭಾರತದಲ್ಲಿದ್ದುಕೊಂಡೇ ವೀಸಾ ಅವಧಿಯನ್ನೂ ವಿಸ್ತರಿಸಿಕೊಳ್ಳಬಹುದು. ಮಾನ್ಯವಾದ ಇ-ಸ್ಟುಡೆಂಟ್ ವೀಸಾಗಳನ್ನು ಹೊಂದಿರುವವರು ಯಾವುದೇ ಇಮಿಗ್ರೇಷನ್ ಚೆಕ್‌ಪಾಯಿಂಟ್ ಮೂಲಕ ಭಾರತವನ್ನು ಪ್ರವೇಶಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News