ಛತ್ತೀಸ್‌ಗಡ ಪತ್ರಕರ್ತನ ಹತ್ಯೆ: ಪತ್ರಿಕಾ ಸ್ವಾತಂತ್ರ್ಯಕ್ಕೆ ಬೆದರಿಕೆಗಳನ್ನು ಎತ್ತಿ ತೋರಿಸಿದ ಡಿಜಿಪಬ್, ಎಡಿಟರ್ಸ್ ಗಿಲ್ಡ್
ಹೊಸದಿಲ್ಲಿ: ಛತ್ತೀಸ್‌ಗಡದ ಸ್ವತಂತ್ರ ಪತ್ರಕರ್ತ ಮುಕೇಶ ಚಂದ್ರಾಕರ್ ಅವರ ಶಂಕಿತ ಹತ್ಯೆಯನ್ನು ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಷನ್ ಮತ್ತು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಖಂಡಿಸಿವೆ. ಜ.೩ರಂದು ಬಿಜಾಪುರ ಜಿಲ್ಲೆಯಲ್ಲಿ ಸೆಪ್ಟಿಕ್ ಟ್ಯಾಂಕ್‌ವೊಂದರಲ್ಲಿ ಚಂದ್ರಾಕರ್ ಶವ ಪತ್ತೆಯಾಗಿತ್ತು.
ಚಂದ್ರಾಕರ್ ಬಸ್ತಾರ್ ಜಂಕ್ಷನ್ ಹೆಸರಿನ ಯೂಟ್ಯೂಬ್ ಚಾನೆಲ್‌ನ್ನು ನಡೆಸುತ್ತಿದ್ದು,ಇದು ದೀರ್ಘಾವಧಿಯ ಸಂಘರ್ಷ ಮತ್ತು ಆದಿವಾಸಿ ಸಮುದಾಯದ ಬದುಕುಗಳಂತಹ ಬಸ್ತಾರ್‌ನ ಸಮಸ್ಯೆಗಳನ್ನು ಕೇಂದ್ರೀಕರಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ ಚಂದ್ರಾಕರ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭ್ರಷ್ಟಾಚಾರದ ಆರೋಪಕ್ಕಾಗಿ ಖಾಸಗಿ ಗುತ್ತಿಗೆದಾರನೋರ್ವನ ಕುರಿತು ತನಿಖೆ ನಡೆಸಿದ್ದರು. ಜ.೧ರಿಂದ ನಾಪತ್ತೆಯಾಗಿದ್ದ ಅವರ ಶವ ಬಳಿಕ ಸದ್ರಿ ಗುತ್ತಿಗೆದಾರನಿಗೆ ಸೇರಿದ ಆಸ್ತಿಯಲ್ಲಿ ಪತ್ತೆಯಾಗಿತ್ತು.
ಚಂದ್ರಾಕರ್ ಸಾವಿನ ಕುರಿತು ತ್ವರಿತ ಮತ್ತು ನ್ಯಾಯಯುತ ತನಿಖೆ ನಡೆಸುವಂತೆ ಛತ್ತೀಸ್‌ಗಡ ರಾಜ್ಯ ಸರಕಾರಕ್ಕೆ ಕರೆ ನೀಡಿರುವ ಡಿಜಿಪಬ್ ಭಾರತದಲ್ಲಿ ಪತ್ರಕರ್ತರಿಗೆ ಹೆಚ್ಚುತ್ತಿರುವ ಬೆದರಿಕೆಗಳನ್ನು ಎತ್ತಿ ತೋರಿಸಿದ್ದು,ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು ವೇಗವಾಗಿ ಇಳಿಯುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಕಳೆದೊಂದು ದಶಕದಲ್ಲಿ ಸರಕಾರದ ಪ್ರತೀಕಾರ ಕ್ರಮಗಳು ಪತ್ರಕರ್ತರ ಭದ್ರತೆ ಮತ್ತು ಸುರಕ್ಷತೆಗೆ ಬೆದರಿಕೆಗಳನ್ನು ಒಡ್ಡುತ್ತಿರುವುದು ಮಾತ್ರವಲ್ಲ,ಕ್ರಿಮಿನಲ್ ಶಕ್ತಿಗಳು,ವಿವಿಧ ಮಾಫಿಯಾ ಗುಂಪುಗಳು ಮತ್ತು ಸ್ಥಳೀಯ ರಾಜಕಾರಣಿಗಳಿಂದಲೂ ಬೆದರಿಕೆಗಳು ಎದುರಾಗುತ್ತಿವೆ. ಸಣ್ಣ ನಗರಗಳು ಮತ್ತು ದೂರದ ಪಟ್ಟಣಗಳಲ್ಲಿ ತಮ್ಮ ಮತ್ತು ತಮ್ಮ ಕುಟುಂಬಗಳಿಗೆ ಅಪಾಯದ ಹಂಗನ್ನು ತೊರೆದು ಪ್ರಮುಖ ಸಾರ್ವಜನಿಕ ಸಮಸ್ಯೆಗಳ ಕುರಿತು ವರದಿ ಮಾಡುವ ಪತ್ರಕರ್ತರ ಹಿತಚಿಂತನೆಯನ್ನು ಸಾರ್ವಜನಿಕರ ಮತ್ತು ವಿಶಾಲ ಮಾಧ್ಯಮ ಸಮುದಾಯ ಪರಿಗಣಿಸುವುದು ಬಹು ಅಪರೂಪ,ಇದು ಬದಲಾಗಬೇಕಿದೆ ಎಂದು ಡಿಜಿಪಬ್ ಹೇಳಿಕೆಯಲ್ಲಿ ತಿಳಿಸಿದೆ.
ಇದೇ ಕಳವಳಗಳನ್ನು ಪ್ರತಿಧ್ವನಿಸಿರುವ ಎಡಿಟರ್ಸ್ ಗಿಲ್ಡ್ ಯುವ ಪತ್ರಕರ್ತನ ಸಾವನ್ನು ಗಂಭೀರ ಕಳವಳದ ವಿಷಯ ಎಂದು ಹೇಳಿದೆ. ಪ್ರಕರಣವನ್ನು ತ್ವರಿತವಾಗಿ ತನಿಖೆ ಮಾಡುವಲ್ಲಿ ಮತ್ತು ತಪ್ಪಿತಸ್ಥರನ್ನು ಕಾನೂನು ಕ್ರಮಕ್ಕೊಳಪಡಿಸುವಲ್ಲಿ ಯಾವುದೇ ಪ್ರಯತ್ನಗಳನ್ನು ಉಳಿಸಬೇಡಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದೆ. ಪತ್ರಕರ್ತರ,ವಿಶೇಷವಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸುರಕ್ಷತೆಯನ್ನು ಖಚಿತಪಡಿಸುವ ಪ್ರಾಮುಖ್ಯಕ್ಕೆ ಒತ್ತು ನೀಡಿರುವ ಅದು,ಯಾವುದೇ ಭೀತಿಯಿಲ್ಲದೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಪತ್ರಿಕಾ ಸ್ವಾತಂತ್ರ್ಯವು ಯಾವುದೇ ಪ್ರಜಾಪ್ರಭುತ್ವಕ್ಕೆ ಮುಖ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಚಂದ್ರಾಕರ ಸಾವಿಗೆ ದುಃಖವನ್ನು ವ್ಯಕ್ತಪಡಿಸಿರುವ ಎಡಿಟರ್ಸ್ ಗಿಲ್ಡ್,ಅಸಹಜ ಸಂದರ್ಭಗಳಲ್ಲಿ ಅವರ ಸಾವು ಎಚ್ಚೆತ್ತುಕೊಳ್ಳಲು ಕರೆಯಾಗಲಿದೆ ಮತ್ತು ಪತ್ರಕರ್ತರ ರಕ್ಷಣೆಗೆ ಉತ್ತಮ ಕ್ರಮಗಳಿಗೆ ಪ್ರೇರಣೆಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದೆ. ದೇಶವು ಚಂದ್ರಾಕರ್ ಸಾವನ್ನು ವ್ಯರ್ಥವಾಗಲು ಬಿಡಬಾರದು ಎಂದು ಅದು ತಿಳಿಸಿದೆ.
ಶಂಕಿತ ಹತ್ಯೆಯನ್ನು ಖಂಡಿಸಿರುವ ಚೆನ್ನೈ ಪ್ರೆಸ್ ಕ್ಲಬ್,ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವಕ್ಕೆ ಮುಖ್ಯವಾಗಿದೆ ಮತ್ತು ಪತ್ರಕರ್ತರ ವಿರುದ್ಧ ಹಿಂಸಾಚಾರದ ಕೃತ್ಯಗಳನ್ನು ಸಹಿಸಕೂಡದು ಎಂದು ಹೇಳಿದೆ.