ಮಧ್ಯಪ್ರದೇಶ | ಶೌಚ ಗುಂಡಿಯಲ್ಲಿ ನಾಲ್ವರ ಮೃತದೇಹ ಪತ್ತೆ

Update: 2025-01-05 10:04 GMT

ಸಾಂದರ್ಭಿಕ ಚಿತ್ರ (PTI)

ಭೋಪಾಲ್: ಮನೆಯೊಂದರ ಹಿಂಬದಿಯಲ್ಲಿನ ಶೌಚ ಗುಂಡಿಯಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿರುವ ಘಟನೆ ಶನಿವಾರ ಸಂಜೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.

ಸಿಂಗ್ರೌಲಿ ಜಿಲ್ಲೆಯ ಬರ್ಗವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಿಂಡಾಲ್ಕೊ ಕಾರ್ಖಾನೆಯ ದ್ವಾರ ಸಂಖ್ಯೆ 3ರ ಬಳಿಯಿರುವ ಬದೋಖರ್ ಗ್ರಾಮದಲ್ಲಿನ ಹರಿಪ್ರಸಾದ್ ಪ್ರಜಾಪತಿ ಎಂಬವರ ನಿವಾಸದ ಹಿಂಬದಿಯಲ್ಲಿ ಈ ಮೃತದೇಹಗಳು ಪತ್ತೆಯಾಗಿವೆ.

ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ನೆರೆಯವರು ಕೊಳೆತ ವಾಸನೆಯ ಜಾಡು ಹಿಡಿದು ಪ್ರಜಾಪತಿಯ ಮನೆಯ ಬಳಿ ಬಂದಾಗ, ಮನೆಯ ಹಿಂಬದಿಯಲ್ಲಿರುವ ಶೌಚ ಗುಂಡಿಯಲ್ಲಿ ನಾಲ್ವರ ಮೃತದೇಹಗಳಿರುವುದನ್ನು ಪತ್ತೆ ಹಚ್ಚಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸಿಂಗ್ರೌಲಿಯ ಪೊಲೀಸ್ ವರಿಷ್ಠಾಧಿಕಾರಿ ಮನೀಸ್ ಖತ್ರಿ, “ಶೌಚ ಗುಂಡಿಯೊಳಗೆ ನಾಲ್ಕು ಮೃತ ದೇಹಗಳಿವೆ. ಅಲ್ಲಿಂದ ಮೃತದೇಹಗಳನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ. ಏಣಿಗಳನ್ನು ಬಳಸಿ ಮೃತದೇಹಗಳನ್ನು ಹೊರತರುವುದು ಅಸಾಧ್ಯವಾಗಿರುವುದರಿಂದ, ಸ್ಥಳದಲ್ಲಿ ಜೆಸಿಬಿ ಯಂತ್ರಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಸಮಾನಾಂತರ ಗುಂಡಿಯನ್ನು ತೋಡುವ ಮೂಲಕ ಮೃತದೇಹಗಳನ್ನು ಹೊರ ತರಲು ಯತ್ನಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಮನೆಯ ಮಾಲಕರ ಸಂಬಂಧಿಕರೂ ಆದ ನೆರೆಯವರು ಶನಿವಾರ ಸಂಜೆ 4 ಗಂಟೆಗೆ ಮೃತದೇಹಗಳನ್ನು ಕಂಡಿದ್ದು, ಅವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೌಚ ಗುಂಡಿಯಿಂದ ಮೃತದೇಹಗಳನ್ನು ಹೊರ ತಂದ ನಂತರವಷ್ಟೆ ಮೃತದೇಹಗಳ ಗುರುತು ದೃಢವಾಗಲಿದೆ. ಆದರೆ, ಮೇಲ್ನೋಟಕ್ಕೆ ಮೃತದೇಹಗಳು ಮನೆಯ ಮಾಲಕರ ಕುಟುಂಬದ ಸದಸ್ಯರದ್ದು ಎಂದು ಶಂಕಿಸಲಾಗಿದೆ. ನೆರೆಯವರು ಮೃತದೇಹಗಳನ್ನು ಹೊರಗಿನಿಂದ ನೋಡಿದ ನಂತರ, ಮೃತದೇಹಗಳ ಪೈಕಿ ಒಂದು ದೇಹವು ಮನೆಯ ಮಾಲಕರ ಪುತ್ರ ಸುರೇಶ್ ಪ್ರಜಾಪತಿಯದ್ದು ಎಂದು ಶಂಕಿಸಿದ್ದಾರೆ” ಎಂದೂ ಅವರು ಹೇಳಿದ್ದಾರೆ.

30 ವರ್ಷದ ಸುರೇಶ್ ಪ್ರಜಾಪತಿ, ಮನೆಯ ಮಾಲಕ ಹರಿಪ್ರಸಾದ್ ಪ್ರಜಾಪತಿಯ ಪುತ್ರನಾಗಿದ್ದು, ನೆರೆಯವರು ಆತನನ್ನು ಕಡೆಯದಾಗಿ ಜನವರಿ 1ರಂದು ಕಂಡಿದ್ದರು. ಆತನನ್ನು ಮರುದಿನ ಕೂಡಾ ಕೆಲವರು ಕಂಡಿದ್ದರು. ಈ ಸಂದರ್ಭದಲ್ಲಿ ಮನೆಯು ತೆರೆದಿತ್ತು, ಕಾರನ್ನು ಅಲ್ಲಿ ನಿಲುಗಡೆ ಮಾಡಲಾಗಿತ್ತು ಹಾಗೂ ಕಾರಿನ ಬೀಗಗಳು ಕಾರಿನಲ್ಲಿಯೇ ಇದ್ದವು ಎಂದು ಮೂಲಗಳು ತಿಳಿಸಿವೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News