ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯ ಕೆನ್ನೆಯಂತೆ ಮಾಡುತ್ತೇವೆ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ ರಮೇಶ್ ಬಿಧುರಿ
ಹೊಸದಿಲ್ಲಿ: ಕಲ್ಕಾಜಿಯ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯ ಕೆನ್ನೆಯಂತೆ ಮಾಡುತ್ತೇವೆ ಎಂದು ಕಲ್ಕಾಜಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಹೇಳಿಕೆಯನ್ನು ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಮೊದಲು ಹಲವು ಬಾರಿ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದ ರಮೇಶ್ ಬಿಧುರಿ, ಕಲ್ಕಾಜಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ.
ವಿವಾದಾತ್ಮಕ ಹೇಳಿಕೆ ಬಗ್ಗೆ ರಮೇಶ್ ಬಿಧುರಿಯನ್ನು Aaj Tak ಪ್ರಶ್ನಿಸಿದೆ. ಈ ವೇಳೆ ಪ್ರತಿಕ್ರಿಯಿಸಿದ ರಮೇಶ್ ಬಿಧುರಿ, ಬಿಹಾರದ ರಸ್ತೆಗಳನ್ನು ಹೇಮಾ ಮಾಲಿನಿ ಅವರ ಕೆನ್ನೆಗೆ ಹೋಲಿಸಿದ ಲಾಲು ಪ್ರಸಾದ್ ಯಾದವ್ ಅವರ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಹೇಳಿಕೆಯು ಕಾಂಗ್ರೆಸ್ ಗೆ ನೋವುಂಟು ಮಾಡಿದ್ದರೆ, ಸಮಾಜವನ್ನು ಪ್ರತಿಬಿಂಬಿಸುವ ತನ್ನ ಕೆಲಸದ ಮೂಲಕ ಭಾರತಕ್ಕೆ ಹೆಮ್ಮೆ ತಂದ ಗೌರವಾನ್ವಿತ ನಟಿ ಹೇಮಾ ಮಾಲಿನಿ ಅವರನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ದಿಲ್ಲಿ ವಿಧಾನಸಭಾ ಚುನಾವಣಾ ಮಧ್ಯೆ ರಮೇಶ್ ಬಿಧುರಿಯ ಹೇಳಿಕೆ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಬಿಜೆಪಿ ಮಹಿಳಾ ವಿರೋಧಿ, ಬಿಧುರಿ ಅವರ ಹೇಳಿಕೆ ನಾಚಿಕೆಗೇಡಿನ ಸಂಗತಿಯಾಗಿದೆ, ಇದು ಸ್ತ್ರೀದ್ವೇಷ ಮನೋಭಾವದ ಪ್ರತಿಬಿಂಬವಾಗಿದೆ ಎಂದು ಎಎಪಿ ಹೇಳಿದೆ. ಕಾಂಗ್ರೆಸ್ ಕೂಡ ಬಿಧುರಿಯವರ ಕ್ಷಮೆಯಾಚನೆಗೆ ಒತ್ತಾಯಿಸಿದ್ದು, ಇಂತಹ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರ ಮೌನವನ್ನು ಪ್ರಶ್ನಿಸಿದೆ.