ಬಿಜೆಪಿಯ ಕಾರ್ಪೊರೇಟ್ ಮಿತ್ರರ ಸಾಲಮನ್ನಾದಿಂದ ಬ್ಯಾಂಕಿಂಗ್ ವಲಯ ಬಿಕ್ಕಟ್ಟಿನಲ್ಲಿ: ರಾಹುಲ್ ಗಾಂಧಿ

ರಾಹುಲ್ ಗಾಂಧಿ | PC : PTI
ಹೊಸದಿಲ್ಲಿ: ಕೇಂದ್ರದ ಬಿಜೆಪಿ ಸರಕಾರವು ಆರ್ಥಿಕತೆಯನ್ನು ಕೆಟ್ಟದಾಗಿ ನಿರ್ವಹಿಸುತ್ತಿದೆಯೆಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸರಕಾರದ ವಿರುದ್ಧ ಶನಿವಾರ ಟೀಕಾಪ್ರಹಾರ ನಡೆಸಿದ್ದಾರೆ. ಬಿಜೆಪಿಯ ಬಿಲಿಯಾಧೀಶ ಸ್ನೇಹಿತರಿಗಾಗಿ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿರುವ ಕಾರಣ, ದೇಶದ ಬ್ಯಾಂಕಿಂಗ್ ವಲಯವು ಬಿಕ್ಕಟ್ಟಿಗೆ ಸಿಲುಕಿದೆಯೆಂದು ಅವರು ಆಪಾದಿಸಿದ್ದಾರೆ.
ಸಾಮಾಜಿಕ ಜಾಲತಾಣ ವೇದಿಕೆ ಎಕ್ಸ್‌ನಲ್ಲಿ ಶನಿವಾರ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ‘‘ಶತಕೋಟ್ಯಾಧಿಪತಿ ಸ್ನೇಹಿತರಿಗಾಗಿ ಬಿಜೆಪಿ ಸರಕಾರವು 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾಮಾಡಿದೆ. ನಿಯಮಗಳ ಕಳಪೆನಿರ್ವಹಣೆಯ ಜೊತೆಗೆ ಸರಕಾರವು ಅದರ ಬಂಡವಾಳಶಾಹಿ ಮಿತ್ರರಿಗೆ ಮನ್ನಣೆ ನೀಡುತ್ತಿರುವುದು ಭಾರತದ ಬ್ಯಾಂಕಿಂಗ್ ವಲಯವನ್ನು ಬಿಕ್ಕಟ್ಟಿಗೆ ತಳ್ಳಿದೆ’’ ಎಂದರು.
ಕಿರಿಯ ಬ್ಯಾಂಕಿಂಗ್ ಉದ್ಯೋಗಿಗಳ ಮೇಲೂ ಇದರ ಪರಿಣಾಮವಾಗಿದ್ದು, ಅವರು ಕೆಲಸದ ಸ್ಥಳದಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದಾರೆ ಹಾಗೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ ಎಂದರು.
782 ಮಂದಿ ಮಾಜಿ ಐಸಿಐಸಿಐ ಬ್ಯಾಂಕ್ ಉದ್ಯೋಗಿಗಳ ನಿಯೋಗವು ಸಂಸತ್‌ನಲ್ಲಿ ತನ್ನನ್ನು ಭೇಟಿಯಾಗಿದ್ದನ್ನು ಪ್ರಸ್ತಾವಿಸಿದ ಅವರು, ಉದ್ಯೋಗದ ಸ್ಥಳದಲ್ಲಿ ಕಿರುಕುಳ, ಬಲವಂತ ವರ್ಗಾವಣೆ ಹಾಗೂ ನೈತಿಕವಲ್ಲದ ಸಾಲ ನೀಡಿಕೆ ಪದ್ಧತಿಯನ್ನು ಬಯಲಿಗೆಳೆದಿದ್ದಕ್ಕಾಗಿ ತಮ್ಮ ವಿರುದ್ಧ ಪ್ರತೀಕಾರಕ್ರಮವೆಸಗಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ ಎಂದು ರಾಹುಲ್ ಬರೆದಿದ್ದಾರೆ.
ಈ ಸಮಸ್ಯೆಯು ಐಸಿಐಸಿಐ ಬ್ಯಾಂಕ್ ಮಾತ್ರವಲ್ಲದೆ, ರಾಷ್ಟ್ರಾದ್ಯಂತದ ಹಲವಾರು ಬ್ಯಾಂಕಿಂಗ್ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂದವರು ಹೇಳಿದ್ದಾರೆ.
ಹಣಕಾಸು ವಲಯವನ್ನು ಬಿಜೆಪಿ ಸರಕಾರವು ನಿರ್ವಹಿಸುತ್ತಿರುವ ರೀತಿಯನ್ನು ಕೂಡಾ ರಾಹುಲ್ ತನ್ನ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ. ಬಿಜೆಪಿ ಸರಕಾರವು ಕೆಟ್ಟದಾಗಿ ಆರ್ಥಿಕತೆಯನ್ನು ನಿರ್ವಹಿಸಿರುವುದರಿಂದ ದೇಶಾದ್ಯಂತದ ತಸಾವಿರಾರು ಪ್ರಾಮಾಣಿಕ ಉದ್ಯೋಗಿಗಳ ಮೇಲೆ ದುಷ್ಪರಿಣಾಮ ಬೀರಿರುವುದು ಕಳವಳಕಾರಿಯಾದ ಸಂಗತಿ ಎಂದವರು ಹೇಳಿದ್ದಾರೆ.
ಈ ವಿಷಯವನ್ನು ತಾನು ಕೈಗೆತ್ತಿಕೊಳ್ಳಲಿರುವುದಾಗಿ ವಾಗ್ದಾನ ಮಾಡಿರುವ ಅವರು, ಕೆಲಸದ ಸ್ಥಳದಲ್ಲಿ ಕಿರುಕುಳ ಹಾಗೂ ಶೋಷಣೆಯ ವಿರುದ್ಧ ಹೋರಾಡುವುದಾಗಿ ತಿಳಿಸಿದರು. ‘‘ಕಾಂಗ್ರೆಸ್ ಪಕ್ಷವು ದುಡಿಯುವ ವರ್ಗದ ಉದ್ಯೋಗಿಗಳಿಗೆ ನ್ಯಾಯ ಒದಗಿಸಲು ಸಂಪೂರ್ಣ ಶ್ರದ್ಧೆಯೊಂದಿಗೆ ಕಾರ್ಯನಿರ್ವಹಿಸಲಿದೆ’’ ಎಂದವರು ಬರೆದಿದ್ದಾರೆ.
ರಾಹುಲ್ ಗಾಂಧಿ ಅವರು ಎಪ್ರಿಲ್ 7ರಂದು ಬಿಹಾರಕ್ಕೆ ಭೇಟಿ ನೀಡಲಿದ್ದು, ಪಾಟ್ನಾದಲ್ಲಿ ನಡೆಯಲಿರುವ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದ ಆನಂತರ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ನಾಯಕ ಕನ್ಹಯ್ಯಾ ಕುಮಾರ್ ಅವರ ನೌಕರಿ ದೋ ಯಾತ್ರಾದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.