ಉತ್ತರ ಪ್ರದೇಶ | ತಂತ್ರಗಾರಿಕೆಯ ನೆಪದಲ್ಲಿ ಗ್ರಾಮೀಣ ಯುವತಿಯರ ದುರ್ಬಳಕೆ: 14 ಮಂದಿಯ ಬಂಧನ

PC - timesofindia
ಮೀರತ್: ತಂತ್ರಗಾರಿಕೆಯ ಸೋಗಿನಲ್ಲಿ ಗ್ರಾಮೀಣ ಭಾಗದ ಅಮಾಯಕ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಗುಂಪೊಂದನ್ನು ಭೇದಿಸಿರುವ ಸಂಭಾಲ್ ಪೊಲೀಸರು, ನಾಲ್ವರು ಸ್ವಘೋಷಿತ ಗುರುಗಳು ಸೇರಿದಂತೆ ಒಟ್ಟು 14 ಮಂದಿಯನ್ನು ಶುಕ್ರವಾರ ಬಂಧಿಸಿದ್ದಾರೆ.
ಎಲ್ಲ ಬಂಧಿತ ಆರೋಪಿಗಳು ಆಳವಾಗಿ ಬೇರೂರಿರುವ ಹಾಗೂ ಸಂಘಟಿತ ಗುಂಪೊಂದರ ಭಾಗವಾಗಿದ್ದು, ಅವರು ತಂತ್ರಗಾರಿಕೆಯ ಸೋಗಿನಲ್ಲಿ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಗುಂಪಿನ ಸದಸ್ಯರ ಪೈಕಿ ನಾಲ್ವರು ಸ್ವಘೋಷಿತ ಗುರುಗಳಿದ್ದು, ಅವರನ್ನು ಆಗ್ರಾದಲ್ಲಿನ ಯಮುನಾ ಸೇತುವೆ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ರಘುಬೀರ್ ಸಿಂಗ್ (45), ಪಪ್ಪು ಲಾಲ್, ರಾಘವೇಂದ್ರ ದಯಾಳ್ (ಎಲ್ಲರೂ ಆಗ್ರಾ ನಿವಾಸಿಗಳು) ಹಾಗೂ ಫಿಯೋಝಾಭಾದ್ ನ ನಿವಾಸಿ ಸೋನು ಸಿಂಗ್ ಎಂದು ಗುರುತಿಸಲಾಗಿದೆ.
ಗುಂಪಿನಲ್ಲಿರುವ ಇತರ ಸದಸ್ಯರನ್ನು ಆಗ್ರಾದವನೇ ಆದ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಜ್ಯೋತಿಷಿ ಡಿ.ಎನ್.ತ್ರಿಪಾಠಿ, ಅಗ್ರಾದಲ್ಲಿನ ಆಯುರ್ವೇದ ಉತ್ಪನ್ನಗಳ ಮಳಿಗೆಯ ಮಾಲಕ ಸಂಜಯ್ ಚೌಹಾಣ್ ಹಾಗೂ ಇಟಾದಲ್ಲಿನ ಔಷಧ ಅಂಗಡಿಯ ಮಾಲಕ ಸಂತೋಷ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಭಾಲ್ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನುಕೃತಿ ಶರ್ಮ, “ಆರೋಪಿಗಳ ಮೊಬೈಲ್ ಫೋನ್ ಗಳಲ್ಲಿ ಸಂತ್ರಸ್ತ ಯುವತಿಯರ ನೂರಾರು ವಿಕೃತ ವಿಡಿಯೊಗಳ ಸಂಗ್ರಹವಿತ್ತು. 18ರಿಂದ 22 ವರ್ಷದ ಯುವಕ, ಯುವತಿಯರು ತಮ್ಮ ಹೆಸರು, ವಯಸ್ಸು, ಎತ್ತರ, ತೂಕ, ದೇಹದ ಅಳತೆ ಹಾಗೂ ಯುವತಿಯರ ಪ್ರಕರಣಗಳಲ್ಲಿ ಕೊನೆಯ ಬಾರಿ ಆಗಿರುವ ಋತುಚಕ್ರದ ವಿವರಗಳನ್ನೊಳಗೊಂಡ ಭಿತ್ತಿ ಫಲಕಗಳನ್ನು ಹಿಡಿದುಕೊಂಡಿರುವ ದೃಶ್ಯಗಳನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು” ಎಂದು ತಿಳಿಸಿದ್ದಾರೆ.
ಅವರ ಬದಿಯಲ್ಲಿ ಪ್ರಾಣಿಗಳ ತ್ಯಾಗವನ್ನು ಸೂಚಿಸುವಂಥ ಗೂಬೆಗಳು, ಆಮೆಗಳು ಹಾಗೂ ಕಳ್ಳಸಾಗಣೆ ಮಾಡಲಾದ ವನ್ಯಜೀವಿಗಳ ಚಿತ್ರಗಳಿದ್ದವು ಎಂದು ಅವರು ಹೇಳಿದ್ದಾರೆ.
ಈ ಗುಂಪಿನ ಸೋಗಿಗೆ ಬಲಿಯಾಗಿರುವ ಯುವತಿಯರು ವಾರಾಣಸಿ, ಇಟಾ, ಮಥುರಾ, ಫಿರೋಝಾಬಾದ್ ಹಾಗೂ ಇನ್ನಿತರ ವಿವಿಧ ಜಿಲ್ಲೆಗಳಿಗೆ ಸೇರಿದ ನಿವಾಸಿಗಳಾಗಿದ್ದಾರೆ. ತನಿಖಾ ಸಂಸ್ಥೆಗಳ ಪ್ರಕಾರ, ಈ ಗುಂಪು ಕಡು ಬಡ ಕುಟುಂಬದ ಯುವಕ-ಯುವತಿಯರಿಗೆ ಆಮಿಷವೊಡ್ಡಿದೆ. ಈ ಗುಂಪು ತನ್ನ ಗುಪ್ತ ಭಾಷೆಯಲ್ಲಿ ಯುವತಿಯರನ್ನು ‘ವಸ್ತು’ ಅಥವಾ ‘ಸಾಮಾನು’ ಅಥವಾ ‘ಟೊಮೆಟೊ’ ಎಂದು ಉಲ್ಲೇಖಿಸಿದೆ.
ಯಾವುದಾದರೂ ಯುವತಿಯನ್ನು ಆಯ್ಕೆ ಮಾಡಬೇಕಾದರೆ, ಅದಕ್ಕೆ ನಿರ್ದಿಷ್ಟ ಮಾನದಂಡವನ್ನೂ ಈ ತಂಡ ಅಳವಡಿಸಿಕೊಂಡಿದೆ. ಆಯ್ಕೆಯಾಗುವ ಯುವತಿಯು ಕನ್ಯೆಯಾಗಿರಬೇಕು, ಕನಿಷ್ಠ ಐದರಿಂದ ಐದೂವರೆ ಅಡಿ ಎತ್ತರವಿರಬೇಕು, ಆಕೆಯ ದೇಹವು ಕಲೆ, ಗಾಯಗಳು ಅಥವಾ ಹಚ್ಚೆಗಳಿಂದಲೂ ಮುಕ್ತವಾಗಿರಬೇಕು. ಆಕೆಗೆ ಈ ಹಿಂದೆ ಯಾವುದೇ ಪ್ರೇಮ ಪ್ರಕರಣದ ಇತಿಹಾಸ ಅಥವಾ ಲೈಂಗಿಕ ಸಂಬಂಧಗಳು ಇರಬಾರದು, ಆಕೆಯ ಮುಖ ಹೆಚ್ಚು ಸುಂದರ ಹಾಗೂ ದೇಹ ಪರಿಪೂರ್ಣವಾಗಿದ್ದಷ್ಟೂ, ಆಕೆಗೆ ಅತಿ ಹೆಚ್ಚು ಸಂಪತ್ತಿನ ಭರವಸೆ ನೀಡುವಂಥ ಮಾನದಂಡಗಳನ್ನು ಅನುಸರಿಸಲಾಗಿತ್ತು. ಒಮ್ಮೆ ಅಂತಹ ಯುವತಿ ಆಯ್ಕೆಯಾದ ನಂತರ, ಆಕೆಯನ್ನು ಲೈಂಗಿಕ ಶೋಷಣೆಯೂ ಸೇರಿದಂತೆ ತಂತ್ರಗಾರಿಕೆಯಗಳಿಗೆ ಒಳಪಡಿಸಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಸೀಮಿತ ಹಣಕಾಸು ಸಂಪನ್ಮೂಲ ಹಾಗೂ ಶಿಕ್ಷಣ ಹೊಂದಿರುವ ಕುಟುಂಬಗಳು ವಂಚನೆಗೆ ಬಹುಬೇಗ ಬಲಿಯಾಗುತ್ತವೆ ಎಂಬುದನ್ನು ತಿಳಿದುಕೊಂಡಿರುವ ಈ ಗುಂಪು, ಅಂತಹ ಕುಟುಂಬಗಳನ್ನೇ ಗುರಿಯಾಗಿಸಿಕೊಂಡು ತನ್ನ ಕಾರ್ಯಾಚರಣೆ ನಡೆಸಿರುವುದು ತನಿಖೆಯ ವೇಳೆ ಬಯಲಾಗಿದೆ.
ವಿಚಾರಣೆಗಾಗಿ ಇಟಾ ಮೂಲದ 20 ವರ್ಷದ ಯುವತಿಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿದ್ದ ಆಕೆಯ ತಂದೆಯು, “ನಾನು ಮೂರು ಬಾರಿ ನನ್ನ ಪುತ್ರಿಯ ಮೇಲೆ ತಂತ್ರಗಾರಿಕೆ ಮಾಡಿಸಿದ್ದೆ. ಆದರೆ, ನಾನು ಇಲ್ಲಿಯವರೆಗೆ ಯಾವುದೇ ಹಣವನ್ನು ಸ್ವೀಕರಿಸಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
ಗುಂಪಿನಿಂದ ತಾನು ಅನುಭವಿಸಿದ ಯಾತನೆಯನ್ನು ಹಂಚಿಕೊಂಡ ಯುವತಿಯು, “ನನಗೆ ಗುರುವಿನೊಂದಿಗೆ ಒಂದು ಕೋಣೆಯಲ್ಲಿ ಕುಳಿತುಕೊಳ್ಳಲು ಸೂಚಿಸಲಾಯಿತು ಹಾಗೂ ನನಗೆ ಪ್ರಸಾದ ನೀಡಿ, ನನ್ನ ಕಣ್ಣು ಮುಚ್ಚಿಕೊಳ್ಳುವಂತೆ ಹೇಳಲಾಯಿತು. ಅದಾದ ನಂತರ, ನನಗೇನೂ ನೆನಪಿಲ್ಲ” ಎಂದು ತಿಳಿಸಿದ್ದಾಳೆ.
ಈ ಪ್ರಕರಣದ ಸಂಬಂಧ ಇಂತಹ ಇನ್ನೂ ಅನೇಕ ಯುವತಿಯರನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದು, ಅವರೆಲ್ಲ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆಯೇ ಎಂಬ ಸಂಗತಿ ಕೂಡಾ ಪೊಲೀಸರ ತನಿಖೆಯ ಭಾಗವಾಗಿದೆ.
ಸೌಜನ್ಯ: TOI