ಕಾರ್ಟೂನ್ ಚಿತ್ರ ವೀಕ್ಷಿಸುತ್ತಿದ್ದ ಐದು ವರ್ಷದ ಮಗು ಹೃದಯಾಘಾತದಿಂದ ಸಾವು
ಬಿಜನೋರ್: ಮೊಬೈಲ್ ಫೋನ್ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದ ಕಾಮಿನಿ ಎಂಬ ಐದು ವರ್ಷದ ಹೆಣ್ಣುಮಗು ಹೃದಯಾಘಾತದಿಂದ ಮೃತಪಟ್ಟ ಘಟನೆ ಉತ್ತರಪ್ರದೇಶದ ಅಮ್ರೋಹ ಜಿಲ್ಲೆಯ ಹಸನ್ಪುರ ಕೋತ್ವಾಲಿ ಹತೈಖೇಡಾದಲ್ಲಿ ಸಂಭವಿಸಿದೆ.
ತಾಯಿಯ ಪಕ್ಕದಲ್ಲಿ ಮಲಗಿಕೊಂಡು ಮೊಬೈಲ್ನಲ್ಲಿ ಕಾರ್ಟೂನ್ ವೀಕ್ಷಿಸುತ್ತಿದ್ದ ಕಾಮಿನಿಯ ಕೈಯಿಂದ ಮೊಬೈಲ್ ಕೆಳಕ್ಕೆ ಬಿದ್ದಿದ್ದು, ಆಕೆ ಪ್ರಜ್ಞೆ ಕಳೆದುಕೊಂಡಳು. ತಕ್ಷಣವೇ ಪಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗೆ ಆಕೆ ಮೃತಪಟ್ಟಿದ್ದಳು ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ಮಗು ಹೃದಯಾಘಾತದಿಂದ ಮೃತಪಟ್ಟಿರಬೇಕು ಎಂದು ಹನಸಪುರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಧ್ರುವೇಂದ್ರ ಕುಮಾರ್ ಹೇಳಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡುವಂತೆ ಮಾಡಿಕೊಂಡ ಮನವಿಗೆ ಕುಟುಂಬ ಒಪ್ಪಿಲ್ಲ ಎಂದು ಅಮ್ರೋಹ ಮುಖ್ಯ ವೈದ್ಯಾಧಿಕಾರಿ ಡಾ.ಸತ್ಯಪಾಲ್ ಸಿಂಗ್ ತಿಳಿಸಿದ್ದಾರೆ.
ಈಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆಯೇ ಅಥವಾ ಇತರ ಕಾಯಿಲೆಯಿಂದ ಸಾವಿಗೀಡಾಗಿದ್ದಾಳೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಕಳೆದ ಎರಡು ತಿಂಗಳಿಂದ ಈ ಭಾಗದಲ್ಲಿ ಇಂಥ ಘಟನೆಯಿಂದ ಸಾವು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಅಮ್ರೋಹ ಮತ್ತು ಬಿಜನೂರು ಜಿಲ್ಲೆಯಲ್ಲಿ ಹತ್ತಾರು ಮಕ್ಕಳು ಮತ್ತು ಯುವಕರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
2023ರ ಡಿಸೆಂಬರ್ 31ರಂದು ಹಸನಪುರದಲ್ಲಿ ಕ್ರಿಕೆಟ್ ಆಡುತ್ತಿದ್ದ ಪ್ರಿನ್ಸ್ ಕುಮಾರ್ (16) ಎಂಬ ಯುವಕ ಪ್ರಜ್ಞೆತಪ್ಪಿ ಬಿದ್ದು ಜೀವ ಕಳೆದುಕೊಂಡಿದ್ದ. ಡಿಸೆಂಬರ್ 9ರಂದು ಶಿಪ್ರಾ (12) ಎಂಭ ವಿದ್ಯಾರ್ಥಿ ತರಗತಿಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದ.