ವಿಧಿ 370 ರದ್ಧತಿಗೆ 5ನೇ ವರ್ಷ | ಪಿಡಿಪಿ, ಎನ್ಸಿ ನಾಯಕರಿಂದ ಗೃಹ ಬಂಧನದ ಆರೋಪ
ಹೊಸದಿಲ್ಲಿ : ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370ನ್ನು ರದ್ದುಗೊಳಿಸಿದ ಐದನೇ ವರ್ಷವಾದ ಇಂದು ತಮ್ಮನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹಾಗೂ ಇತರ ಹಲವು ಪ್ರಾದೇಶಿಕ ಪಕ್ಷಗಳ ನಾಯಕರು ಸೋಮವಾರ ಆರೋಪಿಸಿದ್ದಾರೆ.
‘‘ನಮ್ಮನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಪಿಡಿಪಿ ಕಚೇರಿಗೆ ಬೀಗ ಹಾಕಲಾಗಿದೆ’’ ಎಂದು ಮುಫ್ತಿ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಮುಫ್ತಿ ಅವರು, ‘‘2019 ಆಗಸ್ಟ್ 5 ಜಮ್ಮು ಹಾಗೂ ಕಾಶ್ಮೀರದ ಚರಿತ್ರೆಯಲ್ಲಿ ಕೇವಲ ಕರಾಳ ದಿನವಾಗಿ ಮಾತ್ರ ದಾಖಲಾಗುವುದಿಲ್ಲ. ಬದಲಾಗಿ ಭಾರತದ ಸಂವಿಧಾನಕ್ಕೆ ಕಳಂಕ ತಟ್ಟಿದ ದಿನವಾಗಿ ಕೂಡ ದಾಖಲಾಗುತ್ತದೆ’’ ಎಂದು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ನ ನಾಯಕ ಉಮಾರ್ ಅಬ್ದುಲ್ಲಾ, ಬಿಜೆಪಿ ನಾಯಕರಿಗೆ ಈ ದಿನವನ್ನು ಆಚರಿಸಲು ಅವಕಾಶ ನೀಡಲಾಗಿದೆ. ಆದರೆ, ಇದನ್ನು ವಿರೋಧಿಸಿದವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಅಲ್ತಾಫ್ ಬುಖಾರಿ ನೇತೃತ್ವದ ಆಪ್ನಿ ಪಕ್ಷದ ಕಚೇರಿಯನ್ನು ಒಂದು ದಿನಕ್ಕೆ ಮುಚ್ಚಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ನ ವಕ್ತಾರ ತನ್ವೀರ್ ಸಾದಿಕ್ ಆರೋಪಿಸಿದ್ದಾರೆ. ‘‘ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ. ಇದು ಸಂಪೂರ್ಣ ಅನಗತ್ಯ. ನಾನು ಕೆಲವು ಕೆಲಸಗಳಿಗಾಗಿ ಹೊರಗೆ ಹೋಗಬೇಕಾಗಿದೆ. ಆದರೆ, ನನ್ನ ಮನೆಯ ಗೇಟಿನ ಹೊರಗೆ ನಿಂತ ಪೊಲೀಸರು ಎಲ್ಲಿಗೂ ಹೋಗಲು ಅವಕಾಶ ನೀಡುತ್ತಿಲ್ಲ. ಇದು ಕಾನೂನು ಬಾಹಿರ’’ ಎಂದು ಸಾದಿಕ್ ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.
ಪೀಪಲ್ಸ್ ಕಾನ್ಫರೆನ್ಸ್ನ ಅಧ್ಯಕ್ಷ ಸಜ್ಜಾದ್ ಗನಿ ಲೋನೆ, ಆಗಸ್ಟ್ 5 ಕಾಶ್ಮೀರ ಜನರ ಸಂಪೂರ್ಣ ಅಶಕ್ತೀಕರಣವನ್ನು ನೆನಪಿಸಲಿದೆ ಎಂದಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ತನ್ನ ಹೇಳಿಕೆಯಲ್ಲಿ ಸರಕಾರ ಅನ್ಯಾಯವಾಗಿ ನಮ್ಮ ನಾಯಕರನ್ನು ಗೃಹ ಬಂಧನದಲ್ಲಿ ಇರಿಸಿದೆ. ಶ್ರೀನಗರದ ನವಾ-ಎ-ಸುಭಾದಲ್ಲಿರುವ ಪಕ್ಷದ ಕೇಂದ್ರ ಕಚೇರಿಯನ್ನು ನಿರ್ಜನವಾಗಿಸಿದೆ ಎಂದು ಆರೋಪಿಸಿದೆ.