ಮಣಿಪುರದ ಘರ್ಷಣೆ ನಿರತ ಸಮದಾಯಗಳ ವಶದಲ್ಲಿ 6 ಲಕ್ಷ ಗುಂಡು: ಅಧಿಕಾರಿಗಳು
ಇಂಫಾಲ: ಮಣಿಪುರದಲ್ಲಿ ಘರ್ಷಣೆ ನಿರತ ಸಮುದಾಯಗಳ ವಶದಲ್ಲಿ 6 ಲಕ್ಷಕ್ಕೂ ಅಧಿಕ ಗುಂಡು ಹಾಗೂ ಸುಮಾರು 3,000 ಶಸ್ತ್ರಾಸ್ತ್ರಗಳು ಇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
303 ರೈಫಲ್, ಮೀಡಿಯಂ ಮೆಷಿನ್ ಗನ್ (MMG) ಹಾಗೂ ಎಕೆ ಅಸಾಲ್ಟ್ ರೈಫಲ್, ಕಾರ್ಬೈನ್, ಇನ್ಸಾಸ್ ಲೈಟ್ ಮೆಷಿನ್ ಗನ್ (LMG), ಇನ್ಸಾಸ್ ರೈಫಲ್, ಎಂ-16 ಹಾಗೂ ಎಂಪಿ5 ರೈಫಲ್ ಗಳು ಪೊಲೀಸ್ ಶಸ್ತ್ರಾಗಾರದಿಂದ ಮೇಯಲ್ಲಿ ನಾಪತ್ತೆಯಾಗಿರುವುದು ವರದಿಯಾಗಿದೆ ಎಂದು ಪರಿಸ್ಥಿತಿಯನ್ನು ಸಮೀಪದಿಂದ ಅವಲೋಕಿಸುತ್ತಿರುವ ಅಧಿಕಾರಿಗಳು ವಿವಿಧ ಮೂಲಗಳಿಂದ ಸಂಗ್ರಹಿಸಿದ ದತ್ತಾಂಶ ಉಲ್ಲೇಖಿಸಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಎರಡು ಪ್ರಬಲ ಸಮುದಾಯಗಳ ನಡುವೆ ಜನಾಂಗಿಕ ಘರ್ಷಣೆ ಆರಂಭವಾದ ಬಳಿಕ ಪೊಲೀಸರು ಹಾಗೂ ಭದ್ರತಾ ಅಧಿಕಾರಿಗಳ ಮೇಲೆ ನಡೆದ ದಾಳಿಗಳ ಸಂದರ್ಭ ಸುಮಾರು 6 ಲಕ್ಷ ಗುಂಡುಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ಮುಖ್ಯವಾಗಿ ಪೂರ್ವ ಇಂಫಾಲದ ಪಾಂಗೈಯಲ್ಲಿರುವ ಮಣಿಪುರ ಪೊಲೀಸ್ ಟ್ರೈನಿಂಗ್ ಸೆಂಟರ್ (MTPC) ಹಾಗೂ ಇಂಫಾಲ ನಗರದ ಖಬೆಇಸೋಯಿಯಲ್ಲಿರುವ 7ನೇ ಇಂಡಿಯಾ ರಿಸರ್ವ್ ಬೆಟಾಲಿಯನ್ ಹಾಗೂ 8ನೇ ಮಣಿಪುರ ರೈಫಲ್ ನಿಂದ ಸುಮಾರು 4,537 ಶಸ್ತ್ರಾಸ್ತ್ರಗಳು ಹಾಗೂ 6,32 ಲಕ್ಷ ಸ್ಫೋಟಕಗಳು ನಾಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳವುಗೈಯಲಾದ ಶಸ್ತ್ರಾಸ್ತ್ರಗಳಲ್ಲಿ 2,900 ಮಾರಕ ವರ್ಗಕ್ಕೆ ಸೇರಿವೆ. ಇತರ ಶಸ್ತ್ರಾಸ್ತ್ರಗಳಲ್ಲಿ ಅಶ್ರುವಾಯು ಹಾಗೂ ಮಿನಿ ಫ್ಲೇರ್ ಗನ್ ಗಳು ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.