ತಮಿಳುನಾಡು: ಜೀವಮಾನದಲ್ಲೇ ಮೊದಲ ಬಾರಿ ಮೇಲ್ಜಾತಿಗರ ಬೀದಿಯಲ್ಲಿ ಚಪ್ಪಲಿ ಧರಿಸಿ ನಡೆದ ದಲಿತರು!
ತಿರುಪ್ಪುರ್: ತಿರುಪ್ಪುರ್ ಜಿಲ್ಲೆಯ ಮಡತುಕುಲಂ ತಾಲೂಕಿನ ರಾಜಾವೂರು ಗ್ರಾಮದ 60 ದಲಿತರು ತಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ಗ್ರಾಮದ ಕಂಬಳ ನಾಯ್ಕನ್ ರಸ್ತೆಯಲ್ಲಿ ಚಪ್ಪಲಿಗಳನ್ನು ಧರಿಸಿ ನಡೆದರು. ಹೀಗೆ ಮಾಡುವ ಮೂಲಕ ಈ ಮಾರ್ಗದಲ್ಲಿ ಚಪ್ಪಲಿ ಧರಿಸಿ ದಲಿತರು ನಡೆಯುವಂತಿಲ್ಲ ಎಂಬ ಮೇಲ್ಜಾತಿಯವರ ಅಲಿಖಿತ ನಿಯಮವನ್ನು ಅವರು ಮುರಿದಿದ್ದಾರೆ. ಈ ನಿರ್ದಿಷ್ಟ ರಸ್ತೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಸೈಕಲ್‌ಗಳನ್ನು ಸವಾರಿ ಮಾಡಲೂ ಅನುಮತಿಸಲಾಗುತ್ತಿರಲಿಲ್ಲ ಎಂದು newindianexpress.com ವರದಿ ಮಾಡಿದೆ.
ಈ 300 ಮೀಟರ್ ಉದ್ದದ ರಸ್ತೆಯ ಇಕ್ಕೆಲದ ಸುಮಾರು 60 ನಿವಾಸಿಗಳು ಹಿಂದುಳಿದ ಜಾತಿಗೆ ಸೇರಿದ ನಾಯ್ಕರ್ ಸಮುದಾಯದವರಾಗಿದ್ದಾರೆ. ಈ ಗ್ರಾಮದ 900 ಕುಟುಂಬಗಳ ಪೈಕಿ 800 ಕುಟುಂಬಗಳು ಗೌಂಡರ್ ಮತ್ತು ನಾಯ್ಕರ್ ಸಮುದಾಯದವರು.
ಈ ರಸ್ತೆಯಲ್ಲಿ ಚಪ್ಪಲಿ ಧರಿಸಿ ಸಂಚರಿಸುವ ದಲಿತರಿಗೆ (ಅರುನತತಿಯಾರ್ ಸಮುದಾಯದವರು) ಬೆದರಿಕೆಗಳನ್ನು ಒಡ್ಡಲಾಗುತ್ತಿತ್ತು ಹಾಗೂ ಹಲ್ಲೆಗೈಯ್ಯಲಾಗುತ್ತಿತ್ತು. ಮೇಲ್ಜಾತಿಯ ಮಹಿಳೆಯರೂ ಬೆದರಿಸುತ್ತಿದ್ದರು ಹಾಗೂ ಈ ದಾರಿಯಲ್ಲಿ ಚಪ್ಪಲಿ ಧರಿಸಿ ನಡೆದವರಿಗೆ ಸಾವು ನಿಶ್ಚಿತ ಎಂದು ಹೇಳುತ್ತಿದ್ದರು ಈ ಕಾರಣ ದಲಿತರು ಈ ರಸ್ತೆಯಲ್ಲಿ ಸಂಚರಿಸುತ್ತಿರಲಿಲ್ಲವೆಂದು ಸಮುದಾಯದ ಸದಸ್ಯರೊಬ್ಬರು ಹೇಳುತ್ತಾರೆ.
ದಲಿತ ಸಂಘಟನೆಗಳ ಗಮನಕ್ಕೆ ಈ ವಿಚಾರ ತರಲಾಗಿತ್ತು, ರವಿವಾರ ತಡರಾತ್ರಿ ದಲಿತರು ಚಪ್ಪಲಿ ಧರಿಸಿ ಈ ಮಾರ್ಗದಲ್ಲಿ ಸಂಚರಿಸಿ ದಶಕಗಳ ದೌರ್ಜನ್ಯಕ್ಕೆ ತೆರೆ ಎಳೆದಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ತಮಿಳುನಾಡು ಅಸ್ಪೃಶ್ಯತಾ ನಿವಾರಣಾ ಫ್ರಂಟ್ (ತಿರುಪ್ಪುರ್) ಕಾರ್ಯದರ್ಶಿ ಸಿ ಕೆ ಕನಗರಾಜ್ ಅವರು ಗ್ರಾಮಕ್ಕೆ ಭೇಟಿ ನೀಡಿದ್ದರು. ನಂತರ ಪ್ರತಿಭಟನೆ ನಡೆಸಲು ನಿರ್ಧರಿಸಲಾಯಿತಾದರೂ ಪೊಲೀಸರು ಅನುಮತಿ ನಿರಾಕರಿಸಿದ್ದರಲ್ಲದೆ ಪ್ರತಿಭಟನೆ ಮುಂದೂಡುವಂತೆ ಹೇಳಿದ್ದರೆನ್ನಲಾಗಿದೆ.
ಕೊನೆಗೆ ಸಂಘಟನೆಯ ಸದಸ್ಯರು, ಗ್ರಾಮಸ್ಥರು ಹಾಗೂ ಸಿಪಿಎಂ, ವಿಸಿಕೆ ಮತ್ತು ಎಟಿಪಿ ಪ್ರತಿನಿಧಿಗಳು ಈ ರಸ್ತೆ ಮೂಲಕ ಚಪ್ಪಲಿ ಧರಿಸಿ ಸಾಗಿ ಗ್ರಾಮದ ರಾಜಕಾಳಿಯಮ್ಮನ್ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ದೇವಸ್ಥಾನಕ್ಕೂ ದಲಿತರಿಗೆ ಪ್ರವೇಶವಿರಲಿಲ್ಲ.
ರವಿವಾರ ಸುಮಾರು 60 ದಲಿತರು ಚಪ್ಪಲಿ ಧರಿಸಿ ಈ ರಸ್ತೆಯಲ್ಲಿ ನಡೆದಾಗ ಯಾರೂ ಅವರನ್ನು ತಡೆಯಲಿಲ್ಲ. ಪೊಲೀಸರು ನಿಗಾ ವಹಿಸಿದ್ದರು.
ಆದರೂ ಕೆಲ ದಲಿತರು ಇನ್ನೂ ಭಯದಲ್ಲಿದ್ದರೂ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಯತ್ನ ನಡೆಸಲಾಗುವುದು ಎಂದು ಸಂಘಟನೆಯ ಪ್ರಮುಖರು ಹೇಳಿದ್ದಾರೆ.