ಬಸ್ತರ್ ದಸರಾ ಹಬ್ಬಕ್ಕೆ 600 ವರ್ಷಗಳ ಇತಿಹಾಸ!
ಬಸ್ತರ್: ಛತ್ತೀಸ್ ಗಢ ರಾಜ್ಯದ ಬಸ್ತರ್ ಜಿಲ್ಲೆಯಲ್ಲಿ 600 ವರ್ಷಗಳ ಇತಿಹಾಸವಿರುವ ವಿಶಿಷ್ಟ ದಸರಾ ಹಬ್ಬಕ್ಕೆ ಭಾನುವಾರ ಮುಂಜಾನೆ ಚಾಲನೆ ದೊರಕಿದೆ. ಇಲ್ಲಿ 'ಕಾಚ್ಚಿನ್' ದೇವತೆ ಬಸ್ತರ್ ರಾಜಪರಿವಾರಕ್ಕೆ ಉತ್ಸವ ಆರಂಭಿಸಲು ಅನುಗ್ರಹ-ಅನುಮತಿಯನ್ನು ನೀಡುವ ಸಂಪ್ರದಾಯವಿದೆ. ಕಾಚ್ಚಿನ್ ದೇವತೆಯ ಪ್ರತಿರೂಪವಾಗಿ ಬಾಲಕಿಯೊಬ್ಬಳು ರಾಜಪರಿವಾರಕ್ಕೆ ದಸರಾ ಆಚರಿಸಲು ಅನುಮತಿ ನೀಡುವ ಮೂಲಕ ಆಚರಣೆ ಆರಂಭವಾಯಿತು.
ಮುಖ್ಯ ಕಾರ್ಯಕ್ರಮ ಜಗದಾಳಪುರದಲ್ಲಿ ನಡೆಯಲಿದ್ದು, ಅದ್ಭುತ ಅಲಂಕಾರ ಮತ್ತು ಮೆರವಣಿಗೆಗಳನ್ನು ಆಯೋಜಿಸಲಾಗಿದೆ. ಬಸ್ತರ್ ದಸರಾ ಸಾಮಾನ್ಯವಾಗಿ 75 ದಿನಗಳ ಕಾಲ ನಡೆಯುತ್ತದೆ ಹಾಗೂ ದೇಶದಲ್ಲಿ ಆಚರಣೆಯಾಗುವ ಸುಧೀರ್ಘ ದಸರಾ ಎನಿಸಿಕೊಂಡಿದೆ. ಎಲ್ಲ 75 ದಿನಗಳಲ್ಲೂ ವಿಶಿಷ್ಟ ಆಚರಣೆಗಳು ನಡೆಯಲಿವೆ. ಕೆಲ ಪ್ರದೇಶಗಳಲ್ಲಿ ರೂಢಿಯಲ್ಲಿರುವ ರಾವಣನ ಪ್ರತಿಕೃತಿಯನ್ನು ದಹಿಸುವ ಬದಲು, ಇಲ್ಲಿ ಮಹಿಷಾಸುರ ಮರ್ದಿನಿ ಆದಿಶಕ್ತಿಗೆ ಗೌರವ ಸಮರ್ಪಿಸಲಾಗುತ್ತದೆ. ಜಿಲ್ಲೆಯ ಆದಿವಾಸಿ ಸಮುದಾಯಗಳು ಇಲ್ಲಿನ ದಸರಾ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
"ಇಲ್ಲಿ ಸಂಪ್ರದಾಯಗಳನ್ನು 600 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹಬ್ಬದ ಆಚರಣೆಗೆ ದೇವಿ ಅನುಮತಿ ನೀಡಿದ ಬಳಿಕ, ಹಬ್ಬ ಆರಂಭವಾಗುತ್ತದೆ. ಕಲಶಸ್ಥಾಪನೆ ಮತ್ತು ರಥಯಾತ್ರೆ ಇಂದು ಆರಂಭವಾಗಲಿದೆ ಎಂದು ರಾಜಪರಿವಾರದ ಸದಸ್ಯ ಕಮಲ್ ಚಂದ್ರ ಭಂಜದೇವ್ ಹೇಳಿದ್ದಾರೆ.