ಹುಟ್ಟು ಕುರುಡನ್ನು ಮಟ್ಟ ಹಾಕಿ ಹಲವು ಜೀವಗಳನ್ನು ರಕ್ಷಿಸಿದ ಅಂಧ ಜಲ ಯೋಧ!

Update: 2025-01-01 03:22 GMT

ಭುಲ್ಲು ಸಾಹ್ನಿ PC: TOI

ಪಾಟ್ನಾ: ಭುಲ್ಲು ಸಾಹ್ನಿ ಎಂಬ 35 ವರ್ಷದ ವ್ಯಕ್ತಿ ಹುಟ್ಟಿನಿಂದಲೇ ಅಂಧರು. ಆದರೆ ಪ್ರವಾಹದಲ್ಲಿ ಮುಳುಗುತ್ತಿದ್ದ ಹತ್ತಾರು ಮಂದಿಯನ್ನು ರಕ್ಷಿಸಿದ ಮತ್ತು ಜಲಸಮಾಧಿಯಾದ ಹಲವು ಮಂದಿಯ ಮೃತದೇಹಗಳನ್ನು ಹೊರತೆಗೆದ ವಿಶಿಷ್ಟ ಸಾಧನೆ ಈ ಜಲಯೋಧನದ್ದು.

ಸಮಷ್ಟಿಪುರ ಜಿಲ್ಲೆಯ ಪಟೋರಿ ತಾಲೂಕು ದುಮ್ದುಮಾ ಗ್ರಾಮದ ಸಾಹ್ನಿ ಜೀವನದಲ್ಲಿ ಕಷ್ಟಗಳ ಸರಮಾಲೆಯನ್ನು ಎದುರಿಸಿಯೂ, ಆಪದ್ಭಾಂಧವ ಎನಿಸಿದ್ದಾರೆ. ತಮ್ಮ ಅಂಧತ್ವಕ್ಕೆ ಪರಿಹಾರಾತ್ಮಕವಾಗಿ ಅಪರೂಪದ ಕೌಶಲ ತಮಗೆ ಸಿದ್ಧಿಸಿದೆ ಎಂದು ಸಾಹ್ನಿ ಹೇಳುತ್ತಾರೆ.

ಅಪರೂಪದ ಸಾಹಸ ಮತ್ತು ಮಾನವೀಯತೆ ಪ್ರದರ್ಶಿಸಿರುವ ಸಾಹ್ನಿ ಕಳೆದ ಐದು ವರ್ಷಗಳಲ್ಲಿ ನೀರಿನಲ್ಲಿ ಮುಳುಗುತ್ತಿದ್ದ 13 ಮಂದಿಯನ್ನು ರಕ್ಷಿಸಿದ್ದಾರೆ ಹಾಗೂ 14 ಮೃತದೇಹಗಳನ್ನು ನೀರಿನಿಂದ ಪತ್ತೆ ಮಾಡಿ ಹೊರ ತೆಗೆದಿದ್ದಾರೆ. ತಮ್ಮ ಜೀವವನ್ನು ಪಣಕ್ಕಿಟ್ಟು ಜಿಲ್ಲೆಯಲ್ಲಿ ತುಂಬಿ ಹರಿಯುವ ಗಂಗಾ, ಬುಧಿ ಗಂಧಕ, ಬಾಗಮತಿ ಮತ್ತು ಕಮ್ಲಾ ನದಿಗಳಲ್ಲಿ ಜಲಯೋಧರಾಗಿ ಸಾಹಸ ಮೆರೆದಿದ್ದಾರೆ.

"ತಂದೆ ಕೈಲು ಸಾಹ್ನಿ ಬಾಲ್ಯದಲ್ಲೇ ಈಜು ಹಾಗೂ ಮೀನು ಹಿಡಿಯುವುದು ಹೇಳಿಕೊಟ್ಟರು. ಕ್ರಮೇಣ ನಾನು ಈಜಿನಲ್ಲಿ ಪರಿಣತಿ ಪಡೆದೆ. ನನ್ನ ಜಲಪ್ರೀತಿಯನ್ನು ಜೀವರಕ್ಷಕ ಕೌಶಲವಾಗಿ ಮಾರ್ಪಡಿಸಿಕೊಂಡೆ" ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಮಲ್ಹಾ (ಬೆಸ್ತ) ಸಮುದಾಯಕ್ಕೆ ಸೇರಿದ ಭುಲ್ಲು, ಜಲರಾಶಿಯ ಸುತ್ತಮುತ್ತವೇ ಬೆಳೆದಿದ್ದು, ಜಿಲ್ಲೆಯಲ್ಲಿ ಅತ್ಯಂತ ಬೇಡಿಕೆಯ ವ್ಯಕ್ತಿ. ಅವರ ವಿಶಿಷ್ಟ ಈಜು ತಂತ್ರಗಾರಿಕೆ ಮತ್ತು ನಿರ್ಭೀತಿಯ ಕಾರಣದಿಂದ ಸಂಕಷ್ಟದ ಸಮಯದಲ್ಲಿ ಆಪದ್ಭಾಂಧವರಾಗಿ ರೂಪುಗೊಂಡಿದ್ದಾರೆ.

"ನನಗೆ ದೃಷ್ಟಿ ಇಲ್ಲದಿದ್ದರೇನು? ಅಪರೂಪದ ಗೋಚರ ಕೌಶಲ ನನಗೆ ಬಳುವಳಿಯಾಗಿ ಬಂದಿದೆ. ಇದನ್ನು ಸಂಕಷ್ಟದಲ್ಲಿರುವ ವ್ಯಕ್ತಿಗಳ ರಕ್ಷಣೆಗಾಗಿ ನಾನು ಬಳಸುತ್ತೇನೆ. ಅಂಧನಾಗಿದ್ದರೂ, ನೀರಿಗೆ ಇಳಿದ ತಕ್ಷಣ ನೀರಿನಲ್ಲಿ ಚಲಿಸುವ ಮತ್ತು ನಾಪತ್ತೆಯಾದ ವ್ಯಕ್ತಿಗಳನ್ನು ಗುರುತಿಸುವ ಅಪೂರ್ವ ಪ್ರಜ್ಞೆ ನನ್ನಲ್ಲಿ ಉದಯಿಸುತ್ತದೆ. ನೀರಿನಲ್ಲಿ ಏನೋ ಹೊಳೆದಂತೆ ಕಾಣುತ್ತದೆ ಹಾಗೂ ನಾನು ಅವರನ್ನು ರಕ್ಷಿಸುತ್ತೇನೆ. ಈ ರಕ್ಷಣಾ ಕಾರ್ಯಕ್ಕಾಗಿ ಜನ ನನಗೆ 1500-2000 ರೂಪಾಯಿ ನೀಡುತ್ತಾರೆ. ನನ್ನ ಜೀವನ ಸಾಗಿಸಲು ನನಗೆ ಸಾಕಾಗುತ್ತದೆ" ಎಂದು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News