ಈಡಿ ದಾಳಿ ತಪ್ಪಿಸಿಕೊಳ್ಳಲು ಕೆಲವರು ಪಕ್ಷ ತೊರೆದರು: ಅಜಿತ್ ಪವಾರ್ ಕಾಲೆಳೆದ ಶರದ್ ಪವಾರ್
ಪುಣೆ: ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯದ ಮೂಲಕ ಕೆಲವರ ವಿರುದ್ಧ ತನಿಖೆಯನ್ನು ಕೈಗೊಂಡಿದ್ದರಿಂದ ಅವರು ಎನ್‍ಸಿಪಿ ತೊರೆದರು ಎಂದು ರವಿವಾರ ಎನ್‍ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
ಅವರು ಪಕ್ಷವು ಆಯೋಜಿಸಿದ್ದ ಸಾಮಾಜಿಕ ಮಾಧ್ಯಮ ಸಭೆಯಲ್ಲಿ ಎನ್‍ಸಿಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಳೆದ ತಿಂಗಳು ಶಿವಸೇನೆ-ಬಿಜೆಪಿ ಸರ್ಕಾರವನ್ನು ಸೇರ್ಪಡೆಯಾಗಿದ್ದ ಗುಂಪಿನ ನೇತೃತ್ವ ವಹಿಸಿದ್ದ ತಮ್ಮ ಸೋದರಳಿಯ ಅಜಿತ್ ಪವಾರ್ ಹೆಸರನ್ನು ಪ್ರಸ್ತಾಪಿಸದೆ, ಅಭಿವೃದ್ಧಿಗಾಗಿ ನಾವು ಸರ್ಕಾರದ ಭಾಗವಾಗಲು ಬಯಸಿದೆವು ಎಂಬ ಅವರ ಪ್ರತಿಪಾದನೆಯು ಸತ್ಯವಲ್ಲ ಎಂದು ಪವಾರ್ ತಿಳಿಸಿದ್ದಾರೆ.
“ಈ ಹಿಂದೆ ಕೆಲವು ಬದಲಾವಣೆಗಳಾಗಿವೆ. ನಮ್ಮ ಕೆಲವು ಸದಸ್ಯರು ನಮ್ಮನ್ನು ತೊರೆದಿದ್ದಾರೆ. ಅವರು (ಅಜಿತ್ ಪವಾರ್ ಬಣ) ನಾವು ಅಭಿವೃದ್ಧಿಗಾಗಿ ಪಕ್ಷ ತೊರೆದೆವು ಎಂದು ಹೇಳುತ್ತಿರುವುದೆಲ್ಲ ಸತ್ಯವಲ್ಲ. ಕೇಂದ್ರ ಸರ್ಕಾರವು ಅವರ ವಿರುದ್ಧ ಈಡಿ ತನಿಖೆ ಕೈಗೆತ್ತಿಕೊಂಡಿತು ಹಾಗೂ ಅವರು ಎನ್‍ಸಿಪಿಯನ್ನು ತೊರೆದರು. ಅವರಲ್ಲಿ ಕೆಲವರಿಗೆ (ಅಜಿತ್ ಪವಾರ್ ಬಣ) ನೀವು ಬಿಜೆಪಿಯನ್ನು ಸೇರ್ಪಡೆಯಾಗಿ, ಇಲ್ಲವಾದರೆ ನಿಮ್ಮನ್ನು ಬೇರೆಲ್ಲಿಗಾದರೂ ಕಳಿಸಬೇಕಾಗುತ್ತದೆ ಎಂದು ಬೆದರಿಸಲಾಯಿತು” ಎಂದು ಪವಾರ್ ಆರೋಪಿಸಿದ್ದಾರೆ.
“ಹೀಗಿದ್ದೂ ಕೆಲವು ಪಕ್ಷದ ಸದಸ್ಯರು ತನಿಖೆಯನ್ನು ಎದುರಿಸಲು ಸಿದ್ಧರಿದ್ದರು. ಮಾಜಿ ಗೃಹ ಸಚಿವ ಅನಿಲ್ ದೇಶ್‍ಮುಖ್ ಕಳೆದ 14 ತಿಂಗಳಿನಿಂದ ಜೈಲಿನಲ್ಲಿದ್ದಾರೆ. ದೇಶ್‍ಮುಖ್ ಅವರಿಗೂ ತಮ್ಮ ನಿಷ್ಠೆಯನ್ನು ಬದಲಿಸುವಂತೆ ಕೇಳಲಾಯಿತು. ಆದರೆ, ಅವರು ಎನ್‍ಸಿಪಿಯನ್ನು ತೊರೆಯದಿರುವ ನಿರ್ಧಾರಕ್ಕೆ ಗಟ್ಟಿಯಾಗಿ ಅಂಟಿಕೊಂಡರು” ಎಂದು ಪವಾರ್ ಹೇಳಿದ್ದಾರೆ.
ಎನ್‍ಸಿಪಿ ತೊರೆದ ನಂತರ, ಜುಲೈ ತಿಂಗಳಲ್ಲಿ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಉಳಿದ ಎಂಟು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.