ಇಬ್ಬರು ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪೂರ್ಣಪ್ರಮಾಣದ ಸಂಖ್ಯಾಬಲ ಪಡೆದ ಸುಪ್ರೀಂಕೋರ್ಟ್
ಹೊಸ ದಿಲ್ಲಿ: ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಎನ್.ಕೋಟೀಶ್ವರ್ ಸಿಂಗ್ ಹಾಗೂ ಮದ್ರಾಸ್ ಹೈಕೋರ್ಟಿನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆರ್.ಮಹಾದೇವನ್ ಅವರು ಗುರುವಾರ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಸುಪ್ರೀಂಕೋರ್ಟ್‌ಗೆ ಪೂರ್ಣ ಪ್ರಮಾಣದ ನ್ಯಾಯಾಧೀಶರು ನೇಮಕವಾದಂತಾಗಿದೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ಎನ್.ಕೋಟೀಶ್ವರ್ ಸಿಂಗ್ ಮಣಿಪುರದಿಂದ ಸುಪ್ರೀಂಕೋರ್ಟ್‌ಗೆ ನೇಮಕವಾಗಿರುವ ಪ್ರಪ್ರಥಮ ನ್ಯಾಯಾಧೀಶರಾಗಿದ್ದಾರೆ.
ಸುಪ್ರೀಂಕೋರ್ಟ್ ನ್ಯಾಯಾಲಯದ ಆವರಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಇಬ್ಬರೂ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು. ಈ ಪ್ರಮಾಣ ವಚನದೊಂದಿಗೆ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಒಟ್ಟು 34 ನ್ಯಾಯಮೂರ್ತಿಗಳ ನೇಮಕದೊಂದಿಗೆ ಸುಪ್ರೀಂಕೋರ್ಟ್ ಪೂರ್ಣಪ್ರಮಾಣದ ಸಂಖ್ಯಾಬಲ ಹೊಂದಿದಂತಾಯಿತು.
ಸೆಪ್ಟೆಂಬರ್ 1, 2024ರಂದು ನ್ಯಾ. ಹಿಮಾ ಕೊಹ್ಲಿ ನಿವೃತ್ತರಾಗುವವರೆಗೂ, 34 ನ್ಯಾಯಾಧೀಶರ ಪೂರ್ಣ ಸಂಖ್ಯಾಬಲದೊಂದಿಗೆ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸಲಿದೆ. ಇದಾದ ನಂತರ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ.
ನ್ಯಾ. ಎ.ಎಸ್.ಬೋಪಣ್ಣ ಹಾಗೂ ನ್ಯಾ. ಅನಿರುದ್ಧ್ ಬೋಸ್ ನಿವೃತ್ತರಾದ ನಂತರ ಎರಡು ನ್ಯಾಯಾಧೀಶ ಹುದ್ದೆಗಳು ತೆರವಾಗಿದ್ದವು.