ಸಾರಿಗೆ ಸಿಬ್ಬಂದಿ ಸೇರಿ ಐವರಿಂದ ಅಪ್ರಾಪ್ತೆಯ ಮೇಲೆ ಬಸ್ಸಿನಲ್ಲೇ ಅತ್ಯಾಚಾರ; ಆರೋಪಿಗಳ ಬಂಧನ
ಡೆಹ್ರಾಡೂನ್: ಇಲ್ಲಿನ ಅಂತರರಾಜ್ಯ ಬಸ್ ಟರ್ಮಿನಸ್ ನಲ್ಲಿ ನಿಲ್ಲಿಸಿದ್ದ ಬಸ್ಸಿನೊಳಗೆ 16 ವರ್ಷ ವಯಸ್ಸಿನ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಉತ್ತರಾಖಂಡ ಸಾರಿಗೆ ನಿಗಮದ ಮೂವರು ಸಿಬ್ಬಂದಿ ಸೇರಿದಂತೆ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರಪ್ರದೇಶದ ಮೊರದಾಬಾದ್ ನ ಯುವತಿ ಈ ಬಗ್ಗೆ ಮಕ್ಕಳ ಸಹಾಯವಾಣಿ ಅಧಿಕಾರಿಗಳಿಗೆ ಕೌನ್ಸಿಲಿಂಗ್ ವೇಳೆ ಈ ವಿವರ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಬಸ್ಸಿನ ಚಾಲಕ ಧರ್ಮೇಂದ್ರ ಕುಮಾರ್ (32), ನಿರ್ವಾಹಕ ದೇವೇಂದ್ರ ಕುಮಾರ್ (52), ಟಿಕೆಟ್ ಕೌಂಟರ್ ನ ಕ್ಯಾಷಿಯರ್ ರಾಜೇಶ್ ಕುಮಾರ್ ಸೋನ್ಕರ್ (38), ಗುತ್ತಿಗೆ ಬಸ್ಸಿನ ಚಾಲಕರಾದ ರವಿಕುಮಾರ್ (34) ಮತ್ತು ರಾಜೇಶ್ ಸಿಂಗ್ (57) ಬಂಧಿತರು. ಅಪರಾಧಕ್ಕೆ ಬಳಸಿದ ಬಸ್ ವಶಪಡಿಸಿಕೊಂಡಿರುವ ಪೊಲೀಸರು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ.
ಮನೆಯಿಂದ ಓಡಿ ಬಂದ ಯುವತಿ ದೆಹಲಿಯ ಕಾಶ್ಮೀರ ಗೇಟ್ ಐಎಸ್ ಬಿಟಿಗೆ ಆಗಮಿಸಿದ್ದಳು. ಚಾಲಕ- ನಿರ್ವಾಹಕನೊಂದಿಗೆ ಮಾತನಾಡಿದಾಗ ಡೆಹ್ರಾಡೂನ್ ಗೆ ಕರೆದೊಯ್ಯುವ ಭರವಸೆ ನೀಡಿ ಟಿಕೆಟ್ ಹಣವನ್ನೂ ನೀಡಿದ್ದರು. ಡೆಹ್ರಾಡೂನ್ ತಲುಪಿದಾಗ ಬಸ್ಸನ್ನು ಯಾರಿಗೂ ಕಾಣದ ಜಾಗದಲ್ಲಿ ನಿಲ್ಲಿಸಿ, ಇತರ ಮೂವರ ಜತೆ ಸೇರಿ ಈ ಕೃತ್ಯ ಎಸಗಿದರು ಎಂದು ಹೇಳಲಾಗಿದೆ.
ಈಕೆಯನ್ನು ಡೆಹ್ರಾಡೂನ್ ಐಎಸ್ ಬಿಟಿಯಿಂದ ಪಾಟಿಯಾಲಕ್ಕೆ ಬಸ್ಸಿನಲ್ಲಿ ಕಳುಹಿಸಲು ಚಾಲಕ ಯೋಚಿಸಿದ್ದ. ರಾತ್ರಿ 1.30ರ ವೇಳೆಗೆ ಭದ್ರತಾ ಸಿಬ್ಬಂದಿಗೆ ಆಹಾರ ಮಳಿಗೆ ಬಳಿ ಯುವತಿ ಪತ್ತೆಯಾಗಿದ್ದಾಳೆ. ತಕ್ಷಣವೇ ತುರ್ತು ಸಹಾಯವಾಣಿಗೆ ಮಾಹಿತಿ ನೀಡಲಾಗಿದ್ದು, ಆಶ್ರಯ ಗೃಹಕ್ಕೆ ಕರೆದೊಯ್ಯಲಾಗಿತ್ತು. ಆಗ ಆಕೆ ಆರೋಗ್ಯವಾಗಿದ್ದು, ಸಹಜವಾಗಿದ್ದಳು. ಆಶ್ರಯಗೃಹದಲ್ಲಿ ವೈದ್ಯಕೀಯ ತಪಾಸಣೆ ಮತ್ತು ಕೌನ್ಸಿಲಿಂಗ್ ನಡೆಸಿದಾಗ ತನ್ನ ಪೋಷಕರು ಮೃತಪಟ್ಟಿದ್ದು, ಕುಟುಂಬದಲ್ಲಿ ಉಳಿದವರು ಮನೆಯಿಂದ ಹೊರಹಾಕಿದ್ದಾಗಿ ಬಹಿರಂಗಪಡಿಸಿದ್ದಾಳೆ.
ಮೂರನೇ ಬಾರಿ ಕೌನ್ಸಿಲಿಂಗ್ ವೇಳೆ ಅತ್ಯಾಚಾರ ಘಟನೆಯನ್ನು ವಿವರಿಸಿದ್ದಾಳೆ. ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ಯುವತಿ ಒಬ್ಬ ಆರೋಪಿಯ ಜತೆ ಇದ್ದುದು ಪತ್ತೆಯಾಗಿದ್ದು, ಆತನನ್ನು ಪತ್ತೆ ಮಾಡಿ ವಿಚಾರಣೆಗೆ ಗುರುಪಡಿಸಿದಾಗ ಇತರರ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಎಲ್ಲರೂ ತಪ್ಪೊಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.