ಮತದಾರರ ಗುರುತಿನ ಚೀಟಿಯು ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ: ದಿಲ್ಲಿ ಚುನಾವಣಾ ಆಯೋಗ
ಹೊಸದಿಲ್ಲಿ: ಕೇವಲ ಮತದಾರರ ಗುರುತಿನ ಚೀಟಿಯು ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.
ನವೀಕರಿಸಿದ ಮತದಾರರ ಪಟ್ಟಿಯಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಪಟ್ಟಿ ಮಾಡದ ಹೊರತು ಕೇವಲ ಗುರುತಿನ ಚೀಟಿಯನ್ನು ಹೊಂದಿರುವುದರಿಂದ ಮತದಾನದ ಹಕ್ಕನ್ನು ಖಾತರಿಪಡಿಸುವುದಿಲ್ಲ ಎಂದು ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಜನವರಿ 1ರಂದು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ನಡೆಸಲಾಗುತ್ತಿದ್ದು, ಭಾರತೀಯ ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ. ಮತದಾರರ ನವೀಕೃತ ಪಟ್ಟಿಯಲ್ಲಿ ಎಲ್ಲಾ ಅರ್ಹ ಮತದಾರರ ಹೆಸರುಗಳು ಇರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬೂತ್ ಮಟ್ಟದ ಅಧಿಕಾರಿಗಳು 2024ರ ಆಗಸ್ಟ್ 20ರಿಂದ 2024ರ ಅಕ್ಟೋಬರ್ 18ರವರೆಗೆ ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ಕ್ರಮವು ನೋಂದಾಯಿಸದ ಅರ್ಹ ನಾಗರಿಕರು ಮತ್ತು ಅಕ್ಟೋಬರ್ 1, 2024ರೊಳಗೆ 18 ವರ್ಷ ತುಂಬಿದ ನಿರೀಕ್ಷಿತ ಮತದಾರರಿಗೆ ನೋಂದಾವಣೆಗೆ ಮತ್ತು ಮರಣ ಹೊಂದಿದ, ಸ್ಥಳಾಂತರಗೊಂಡವರ ಹೆಸರನ್ನು ಡಿಲಿಟ್ ಮಾಡಲು ಮತ್ತು ನಕಲಿ ನಮೂದುಗಳನ್ನು ಗುರುತಿಸಲು ಸಹಕಾರಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮತದಾರರಾಗಿ ನೋಂದಾಯಿಸದ ನಾಗರಿಕರು ನಮೂನೆ 6 ಅನ್ನು ಬಳಸಿಕೊಂಡು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚೆಗೆ ದಿಲ್ಲಿಯ ಓಖ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ನೋಂದಣಿಗಾಗಿ ಸುಳ್ಳು ದಾಖಲೆಗಳನ್ನು ಸಲ್ಲಿಸಿದ ಎಂಟು ವ್ಯಕ್ತಿಗಳ ವಿರುದ್ಧ ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಅಂತಹವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಚುನಾವಣಾ ಆಯೋಗವು ತಿಳಿಸಿದೆ.