ದಿಲ್ಲಿಗೆ ತೆರಳಬೇಕಿದ್ದ ವಿಮಾನಕ್ಕೆ ಅಡ್ಡಿಪಡಿಸಲು ಎರಡು ಹುಸಿ ಬೆದರಿಕೆ ಕರೆಗಳನ್ನು ಮಾಡಿದ ಮಹಿಳೆ!
ಮುಂಬೈ: ದಿಲ್ಲಿಗೆ ನಿರ್ಗಮಿಸಬೇಕಿದ್ದ ವಿಮಾನದ ಹಾರಾಟಕ್ಕೆ ಅಡ್ಡಿಪಡಿಸಲು ಮಹಿಳೆಯೊಬ್ಬರು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ಹುಸಿ ಬೆದರಿಕೆ ಕರೆಗಳನ್ನು ಮಾಡಿರುವ ಘಟನೆ ರವಿವಾರ ನಡೆದಿದೆ.
ರವಿವಾರ ಮುಂಜಾನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಹಾಯವಾಣಿಗೆ ಸತತ ಎರಡು ಬಾರಿ ಕರೆ ಮಾಡಿರುವ ಮಹಿಳೆಯೊಬ್ಬರು, "ಬಹಿರಂಗಪಡಿಸಲು ಸಾಧ್ಯವಿಲ್ಲದ ಘಟನೆಯೊಂದು ನಡೆಯುವ ಸಾಧ್ಯತೆ ಇರುವುದರಿಂದ, ಮುಂಬೈ-ದಿಲ್ಲಿ ಮಾರ್ಗದ ವಿಮಾನ ಹಾರಾಟವನ್ನು ರದ್ದುಗೊಳಿಸಿ" ಎಂದು ಮನವಿ ಮಾಡಿದ್ದಾಳೆ.
ರವಿವಾರ ಮುಂಜಾನೆ 12.41 ಗಂಟೆಗೆ ಮೊದಲ ಬೆದರಿಕೆ ಕರೆ ಬಂದಿದೆ. ಕರೆ ಮಾಡಿರುವ ಮಹಿಳೆಯು ತನ್ನನ್ನು ಝೋಯಾ ಎಂದು ಗುರುತಿಸಿಕೊಂಡಿದ್ದಾಳೆ. ಮತ್ತೆ 12.45 ಗಂಟೆಗೆ ಕರೆ ಮಾಡಿರುವ ಸದರಿ ಮಹಿಳೆಯು, ವಿಮಾನ ರದ್ದಾಯಿತೆ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ, ನಾನು ವಿಮಾನ ಪ್ರಯಾಣಿಕರ ಸುರಕ್ಷತೆ ಬಗ್ಗೆ ಕಳವಳಗೊಂಡಿದ್ದೇನೆ ಎಂದೂ ಅಲವತ್ತುಕೊಂಡಿದ್ದಾಳೆ. ಆದರೆ, ವಿಮಾನವನ್ನು ಯಾಕೆ ರದ್ದುಗೊಳಿಸಬೇಕು ಎಂಬ ಯಾವ ಕಾರಣವನ್ನೂ ನೀಡಿಲ್ಲ. ಮುಂಬೈನಿಂದ ದಿಲ್ಲಿಗೆ ತೆರಳಬೇಕಿದ್ದ ವಿಮಾನವು ಮುಂಜಾನೆ 12.45ರ ವೇಳೆಗೆ ವಿಮಾನ ನಿಲ್ದಾಣದಿಂದ ನಿರ್ಗಮಿಸಬೇಕಿತ್ತು.
ಈ ಕುರಿತು ವಿಮಾನ ನಿಲ್ದಾಣ ಸಿಬ್ಬಂದಿ ಸಹಾರಾ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಕರೆಯು ಪೂರ್ವ ಅಂಧೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳದಿಂದ ಬಂದಿರುವುದನ್ನು ಪೊಲೀಸರು ಕಂಡು ಹಿಡಿದಿದ್ದಾರೆ. ಆದರೆ, ಕರೆ ಮಾಡಿದ ಮಹಿಳೆಯನ್ನು ಇದುವರೆಗೂ ಪತ್ತೆ ಹಚ್ಚಲಾಗಿಲ್ಲ.
ನಂತರ, ಈ ಸಂಬಂಧ ಸಹಾರಾ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಅದು ಹುಸಿ ಬೆದರಿಕೆ ಕರೆ ಎಂಬುದು ದೃಢಪಟ್ಟಿದ್ದು, ಮುಂದಿನ ತನಿಖೆ ಪ್ರಗತಿಯಲ್ಲಿದೆ.