ಈ ನಗರದಲ್ಲಿ ಭಿಕ್ಷುಕರಿಗೆ ಹಣ ನೀಡಿದರೆ ಪೊಲೀಸ್ ಪ್ರಕರಣ ದಾಖಲು!
ಭೋಪಾಲ್: ಇನ್ನು ಮುಂದೆ ಈ ನಗರದಲ್ಲಿ ಭಿಕ್ಷುಕರಿಗೆ ಹಣ ನೀಡಲು ಮುಂದಾಗುವವರು ಪೊಲೀಸರ ಪ್ರಕರಣ ಎದುರಿಸಲೂ ಸಿದ್ಧವಾಗಿರಬೇಕಾಗುತ್ತದೆ! ಹಾಗಂತ ಇದು ವಿದೇಶಿ ನಗರವೇನೂ ಅಲ್ಲ; ಬದಲಿಗೆ ಭಾರತದ ಅತ್ಯಂತ ಸ್ವಚ್ಛ ನಗರ ಎಂಬ ಹಿರಿಮೆಗೆ ಭಾಜನವಾಗಿರುವ ಇಂದೋರ್ ನಗರ. ನಗರದ ಬೀದಿಗಳನ್ನು ಭಿಕ್ಷುಕರಿಂದ ಮುಕ್ತಗೊಳಿಸಲು ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ, ಜನವರಿ 1ರಿಂದ ಇಲ್ಲಿನ ರಸ್ತೆಗಳಲ್ಲಿ ಅಡ್ಡಾಡುವ ಭಿಕ್ಷುಕರಿಗೆ ಹಣ ನೀಡುವವರ ವಿರುದ್ಧ ಪ್ರಕರಣ ದಾಖಲಿಸಲು ಇಂದೋರ್ ಜಿಲ್ಲಾಡಳಿತ ನಿರ್ಧರಿಸಿದೆ.
ಈಗಾಗಲೇ ಇಂದೋರ್‌ನಲ್ಲಿ ಭಿಕ್ಷೆ ನಿಷೇಧಿಸುವ ಆದೇಶವನ್ನು ಜಿಲ್ಲಾಡಳಿತ ಜಾರಿಗೊಳಿಸಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. "ಭಿಕ್ಷೆಯ ವಿರುದ್ಧದ ನಮ್ಮ ಜಾಗೃತಿ ಅಭಿಯಾನ ಈ ತಿಂಗಳ ಅಂತ್ಯದವರೆಗೆ ಮುಂದುವರಿಯಲಿದೆ. ಜನವರಿ 1ರಿಂದ ಯಾರಾದರೂ ಭಿಕ್ಷೆ ನೀಡುವುದು ಕಂಡು ಬಂದರೆ, ಅಂಥವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಜನರಿಗೆ ಭಿಕ್ಷೆ ನೀಡುವ ಪಾಪದಲ್ಲಿ ಇಂದೋರ್ ನಿವಾಸಿಗಳು ಭಾಗಿಯಾಗಬಾರದು ಎಂದು ನಾನು ಮನವಿ ಮಾಡುತ್ತೇನೆ" ಎಂದು ಅವರು ಕರೆ ನೀಡಿದ್ದಾರೆ.
ಭಿಕ್ಷುಕರಿಗೆ ಪುನರ್ವಸತಿ ಒದಗಿಸುವ ಕೇಂದ್ರ ಸರಕಾರದ ಪ್ರಾಯೋಗಿಕ ಯೋಜನೆಯ ಭಾಗವಾಗಿ ಇಂದೋರ್ ಬೀದಿಗಳನ್ನು ಭಿಕ್ಷುಕ ಮುಕ್ತವನ್ನಾಗಿಸುವ ಪ್ರಯತ್ನಗಳಿಗೆ ಚಾಲನೆ ನೀಡಲಾಗಿದೆ. ಈ ಯೋಜನೆ 10 ನಗರಗಳನ್ನು ಹೊಂದಿದ್ದು, ದಿಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂದೋರ್, ಲಕ್ನೊ, ಮುಂಬೈ, ನಾಗಪುರ, ಪಾಟ್ನಾ ಮತ್ತು ಅಹಮದಾಬಾದ್ ನಗರಗಳು ಸೇರಿವೆ.