ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಅಧ್ಯಕ್ಷ ದಿಸನಾಯಕೆ ಮಾತುಕತೆ
ಹೊಸದಿಲ್ಲಿ: ಶ್ರೀಲಂಕಾದ ವಿದ್ಯುತ್ ಸ್ಥಾವರಗಳಿಗೆ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೂರೈಸಲು ಭಾರತ ಉದ್ದೇಶಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಭಾರತ ಭೇಟಿ ಸಂದರ್ಭ ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರಾ ದಿಸ್ಸಾನಾಯಕೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಬಾಂಧವ್ಯವನ್ನು ವೃದ್ಧಿಸುವ ಸರಣಿ ಸಹಯೋಗದ ಉಪಕ್ರಮಗಳನ್ನು ಕೂಡ ಘೋಷಿಸಿದರು.
ಉಭಯ ನಾಯಕರ ಮಾತುಕತೆ ಆರ್ಥಿಕ ಸಹಕಾರ, ರಕ್ಷಣಾ ಸಹಯೋಗ, ವಿದ್ಯುತ್ ಸಂಪರ್ಕ, ಪ್ರಾದೇಶಿಕ ಸ್ಥಿರತೆಗೆ ಉತ್ತೇಜನ ಹಾಗೂ ಉಭಯ ದೇಶಗಳ ನಡುವಿನ ಅಭಿವೃದ್ಧಿಯನ್ನು ಕೇಂದ್ರೀಕರಿಸಿದ್ದವು.
ಭಾರತ ಸರಕಾರ ಸ್ವಾಮಿತ್ವದ ಪೆಟ್ರೋನೆಟ್ ಎಲ್‌ಎನ್‌ಜಿ ಕೊಚ್ಚಿ ಟರ್ಮಿನಲ್ ಮೂಲಕ ಕೊಲೊಂಬೊ ಮೂಲದ ಐಟಿಎಲ್ ಹೋಲ್ಡಿಂಗ್ಸ್‌ಗೆ 5 ವರ್ಷಗಳ ಕಾಲ ಎಲ್‌ಎನ್‌ಜಿ ಪೂರೈಸುವುದರ ಜೊತೆಗೆ ಶ್ರೀಲಂಕಾದ ವಿದ್ಯುತ್ ಸ್ಥಾವರಗಳಿಗೆ ಎಲ್‌ಎನ್‌ಜಿ ಪೂರೈಸಲು ಭಾರತ ನಿರ್ಧರಿಸಿದೆ. ಇಂಧನ ಭದ್ರತೆಯನ್ನು ವೃದ್ಧಿಸಲು ತಮ್ಮ ವಿದ್ಯುತ್ ಜಾಲಗಳನ್ನು ಜೋಡಿಸುವ ಹಾಗೂ ಬಹು ಉತ್ಪನ್ನ ಪೆಟ್ರೋಲಿಯಂ ಪೈಪ್ ಲೈನ್‌ಗಳನ್ನು ನಿರ್ಮಾಣ ಮಾಡಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.
ಭದ್ರತೆಯ ಸಮಾನ ಅಂಶಗಳ ಬಗ್ಗೆ ಗಮನ ಸೆಳೆದ ಮೋದಿ, ರಕ್ಷಣಾ ಸಹಕಾರ ಒಪ್ಪಂದವನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಯೋಜನೆಯನ್ನು ಘೋಷಿಸಿದರು. ಸಾಗರ ತೀರದ ಭಧ್ರತೆ, ಭಯೋತ್ಪಾದನೆ ನಿಗ್ರಹ ಪ್ರಯತ್ನಗಳು, ಸೈಬರ್ ಭದ್ರತೆ ಹಾಗೂ ವಿಪತ್ತು ಪರಿಹಾರ ಕಾರ್ಯಾಚರಣೆಗಳೊಂದಿಗೆ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಗೆ ಕೊಲೊಂಬೊ ಭದ್ರತಾ ಸಮಾವೇಶದ ಪ್ರಾಮುಖ್ಯತೆಯನ್ನು ಉಭಯ ನಾಯಕರು ಒತ್ತಿ ಹೇಳಿದರು.
ಪ್ರಾದೇಶಿಕ ಶಾಂತಿ, ಭದ್ರತೆ ಹಾಗೂ ಅಭಿವೃದ್ಧಿಗೆ ಕೊಲೊಂಬೊ ಭದ್ರತಾ ಸಮಾವೇಶ ಪ್ರಮುಖ ವೇದಿಕೆ ಎಂಬುದು ನಮ್ಮ ಭಾವನೆ. ಇದರ ಅಡಿಯಲ್ಲಿ ಸಾಗರ ತೀರದ ಭದ್ರತೆ, ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ, ಅಕ್ರಮ ಸಾಗಾಟ ಹಾಗೂ ಸಂಘಟಿತ ಅಪರಾಧಗಳ ವಿರುದ್ಧ ಹೋರಾಟ, ಮಾನವೀಯ ನೆರವು, ವಿಪತ್ತು ಪರಿಹಾರದಂತಹ ವಿಷಯಗಳಲ್ಲಿ ಸಹಕಾರವನ್ನು ವೃದ್ಧಿಸಲಾಗುವುದು ಎಂದು ಮೋದಿ ಹೇಳಿದ್ದಾರೆ.
ಭೌತಿಕ, ಡಿಜಿಟಲ್ ಹಾಗೂ ಇಂಧನ ಮೂಲಭೂತ ಸೌಕರ್ಯದ ಅಭಿವೃದ್ಧಿ ಸೇರಿದಂತೆ ಹೂಡಿಕೆ ಆಧಾರಿತ ಬೆಳವಣಿಗೆ ಹಾಗೂ ಶ್ರೀಲಂಕಾದೊಂದಿಗೆ ಸಂಪರ್ಕದ ಭಾರತದ ಭದ್ರತೆಯನ್ನು ಕೂಡ ಮೋದಿ ಅವರು ಮರು ಉಚ್ಚರಿಸಿದರು.
ಶ್ರೀಲಂಕಾದ ಅಭೂತಪೂರ್ವ ಆರ್ಥಿಕ ಬಿಕ್ಕಟ್ಟಿನ ಸಂದರ್ಭ, ಮುಖ್ಯವಾಗಿ ಸಾಲ ಮರು ರಚನೆ ಪ್ರಕ್ರಿಯೆಯ ವೇಳೆ ನೀಡಿದ ಬೆಂಬಲಕ್ಕೆ ದಿಸ್ಸಾನಾಯಕೆ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದರು. ಮೀನುಗಾರರ ವಿಷಯದ ಕುರಿತಂತೆ ಸುಸ್ಥಿರ ಪರಿಹಾರದ ಅಗತ್ಯದ ಕುರಿತು ಅವರು ಮಾತನಾಡಿದರು.
ಭಾರತದ ಭದ್ರತೆಗೆ ಧಕ್ಕೆ ತರುವ ಉದ್ದೇಶದಿಂದ ತನ್ನ ಭೂಭಾಗವನ್ನು ಯಾವುದೇ ರೀತಿಯಲ್ಲಿ ಬಳಸಲು ಅನುಮತಿ ನೀಡುವುದಿಲ್ಲ ಎಂದು ಶ್ರೀಲಂಕಾ ಸೋಮವಾರ ಭರವಸೆ ನೀಡಿದೆ. ಭಾರತವನ್ನು ಗುರಿಯಾಗಿರಿಸಿ ಚೀನಾ ತನ್ನ ‘ಮಿಶನ್ ಇಂಡಿಯನ್ ಓಶಿಯನ್’ವನ್ನು ಆಕ್ರಮಣಕಾರಿಯಾಗಿ ಅನುಸರಿಸುತ್ತಿರುವ ಸಂದರ್ಭ ಶ್ರೀಲಂಕಾ ಭಾರತಕ್ಕೆ ಈ ಭರವಸೆ ನೀಡಿದೆ.