ಸಹಕಾರಿ ಸಂಘಗಳ ಚುನಾವಣೆಗೆ ಪರಸ್ಪರ ಕೈ ಜೋಡಿಸಿಕೊಂಡ ಟಿಎಂಸಿ- ಬಿಜೆಪಿ!

Update: 2024-12-16 17:27 GMT

ಸಾಂದರ್ಭಿಕ ಚಿತ್ರ | PC : PTI 

ಕೋಲ್ಕತ್ತಾ: ನಂದಿಗ್ರಾಮದಲ್ಲಿರುವ ಪುಟ್ಟ ಸಹಕಾರಿ ಸಂಘದ 54 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 32 ಸ್ಥಾನಗಳು ಹಾಗೂ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಕುತೂಹಲಕಾರಿ ಸಂಗತಿಯೆಂದರೆ, ಈ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು!

ದಿಲ್ಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ಬದ್ಧ ವೈರಿಗಳಾಗಿರುವ ಟಿಎಂಸಿ ಹಾಗೂ ಬಿಜೆಪಿ ನಡುವಿನ ಈ ಪರಸ್ಪರ ಒಪ್ಪಂದ ರಾಜಕೀಯ ವಲಯದಲ್ಲಿ ಪ್ರಶ್ನೆಗಳನ್ನು ಮೂಡಿಸಿದೆ. ನಂದಿಗ್ರಾಮದಲ್ಲಿನ ಸಹಕಾರ ಸಂಘವು ರಾಜ್ಯ ವಿಧಾನಸಭಾ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸುವೇಂದು ಅಧಿಕಾರಿ ಗೆಲುವು ಗಳಿಸಿದ್ದರು.

ಪೂರ್ಬ ಮೇದಿನಿಪುರ್ ಜಿಲ್ಲೆಯ ನಂದಿಗ್ರಾಮದಡಿ ಬರುವ ರಾಮಪುರದಲ್ಲಿನ ದೀನಬಂಧು ಸಹಕಾರಿ ಕೃಷಿ ಅಭಿವೃದ್ಧಿ ಸಂಘಕ್ಕೆ ಜನವರಿ 5ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಯಾವ ಪಕ್ಷಗಳೂ ಪರಸ್ಪರ ಎದುರಾಳಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇದ್ದುದರಿಂದ, ಅವಿರೋಧ ಆಯ್ಕೆಗೊಂಡ ಅಭ್ಯರ್ಥಿಗಳ ಫಲಿತಾಂಶವನ್ನು ಡಿಸೆಂಬರ್ 14ರಂದು ಪ್ರಕಟಿಸಲಾಗಿತ್ತು.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಭೇಕುಟಿಯ ಅಂಚಲ್ ಟಿಎಂಸಿ ಘಟಕದ ಕಾರ್ಯದರ್ಶಿ ಅರೂಪ್ ಗೋಲ್, "ಈ ನಿರ್ಧಾರವನ್ನು ಸ್ಥಳೀಯ ಜನರು ಕೈಗೊಂಡಿದ್ದಾರೆ. ಚುನಾವಣೆಗೆ ಹಣ ಖರ್ಚಾಗುತ್ತದೆ. ಸಹಕಾರ ಸಂಘದ ಚುನಾವಣೆಯನ್ನು ವ್ಯವಸ್ಥೆಗೊಳಿಸಲು 2 ಲಕ್ಷ ರೂ. ವೆಚ್ಚವಾಗುತ್ತಿತ್ತು. ಹೀಗಾಗಿ ಉತ್ತಮ ಯೋಚನೆಯುಳ್ಳ ವ್ಯಕ್ತಿಗಳು ಸಭೆ ಸೇರಿ, ಸೀಟು ಹೊಂದಾಣಿಕೆಯ ನಿರ್ಧಾರ ಕೈಗೊಂಡಿದ್ದಾರೆ" ಎಂದು ಹೇಳಿದ್ದಾರೆ.

ಅರೂಪ್ ಗೋಲ್ ಅವರ ಮಾತನ್ನು ತಮ್ಲುಕ್ ಜಿಲ್ಲೆಯ ಬಿಜೆಪಿ ಸಂಘಟನಾ ಸದಸ್ಯ ಹಾಗೂ ನಾಯಕ ಸುದೀಪ್ ದಾಸ್ ಕೂಡಾ ಸಮರ್ಥಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News