ತೋಳದ ಬಾಯಿಯಿಂದ ಆರು ವರ್ಷದ ಮಗುವನ್ನು ರಕ್ಷಿಸಿದ ಮಹಿಳೆ!
ಲಕ್ನೋ: ಹೊರಗೆ ನಿದ್ರಿಸುತ್ತಿದ್ದ ಆರು ವರ್ಷದ ಮಗನ ಕೊರಳು ಹಿಡಿದು ಕಚ್ಚಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆತನ ಚೀರಾಟದಿಂದ ಎಚ್ಚರಗೊಂಡ ಮಹಿಳೆ ತೋಳವನ್ನು ಬೆದರಿಸಿ ಸಾವಿನ ದವಡೆಯಿಂದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ಘಟನೆ ಉತ್ತರ ಪ್ರದೇಶದ ಬಹ್ರೀಚ್ ನಲ್ಲಿ ಭಾನುವಾರ ನಡೆದಿದೆ.
ಹರ್ಡೀ ಗ್ರಾಮದ ಗುಡಿಯಾ ಹಾಗೂ ಆಕೆಯ ಮಗ ಪಾರಸ್ ವರಾಂಡಾದಲ್ಲಿ ಮಂಚದ ಮೇಲೆ ಮಲಗಿದ್ದರು. ಮುಂಜಾನೆ ಸುಖ ನಿದ್ದೆಯಲ್ಲಿದ್ದ ಸಂದರ್ಭ ಮಗುವನ್ನು ಗುರಿ ಮಾಡಿ ತೋಳ ದಾಳಿ ಮಾಡಿತು. ಇದೇ ಪ್ರದೇಶದಲ್ಲಿ ಜುಲೈ 26ರಂದು ತಾಯಿ ಪಕ್ಕ ಮಲಗಿದ್ದ ಏಳು ವರ್ಷದ ಬಾಲಕನನ್ನು ತೋಳ ದಾಳಿ ಮಾಡಿ ಕೊಂದು ಹಾಕಿತ್ತು.
ಆದರೆ ಪಾರಸ್ ಅದೃಷ್ಟ ಚೆನ್ನಾಗಿತ್ತು. ಆತನ ಕುತ್ತಿಗೆಯಲ್ಲಿ ತೋಳ ಕಚ್ಚಿದ ಗುರುತುಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
"ನನಗೆ ಎಚ್ಚರವಾದಾಗ ಮಗ ತೋಳದ ಬಾಯಿಯಲ್ಲಿದ್ದ. ತಕ್ಷಣವೇ ಎಲ್ಲ ಬಲ ಹಾಕಿ ಪ್ರಾಣಿಯ ಬಾಯಿಯಿಂದ ಮಗನನ್ನು ಎಳೆಯುವ ಪ್ರಯತ್ನ ಮಾಡಿದೆ. ನಾನು ಕೂಗಿಕೊಂಡಾಗ ಅಕ್ಕಪಕ್ಕದವರು ಎಚ್ಚರಗೊಂಡಾಗ ತೋಳ ಕತ್ತಲಲ್ಲಿ ಮರೆಯಾಯಿತು" ಎಂದು ಗುಡಿಯಾ ವಿವರಿಸಿದರು.
ಬಹ್ರೀಚ್ ಪ್ರದೇಶದಲ್ಲಿ ಮಾರ್ಚ್ ನಿಂದೀಚೆಗೆ ತೋಳದ ದಾಳಿಯಿಂದ ಏಳು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವಿಗೀಡಾಗಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪಾರಸ್ ಮೇಲೆ ನಸುಕಿನ 2.30ರ ವೇಳೆ ದಾಳಿ ನಡೆದಿದೆ. ಪಕ್ಕದ ಗ್ರಾಮದ ಮಹ್ಸಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.