ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಆಪ್ ನಿರ್ಧಾರ

Update: 2024-10-09 17:18 GMT

ಆಪ್ ವಕ್ತಾರೆ ಪ್ರಿಯಾಂಕ ಕಕ್ಕರ್ | PC : PTI

ಹೊಸದಿಲ್ಲಿ : ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ತಾನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷವು ಹೇಳುವ ಮೂಲಕ ಕಾಂಗ್ರೆಸ್ ಜೊತೆ ಮೈತ್ರಿಯ ಸಾಧ್ಯತೆಯನ್ನು ತಳ್ಳಿಹಾಕಿದೆ.

‘‘ಅತಿಯಾದ ಆತ್ಮವಿಶ್ವಾಸ ಹೊಂದಿರುವ ಕಾಂಗ್ರೆಸ್ ಹಾಗೂ ಉದ್ದಟತನದ ಬಿಜೆಪಿ ವಿರುದ್ಧ ಹೋರಾಡಲು ನಾವು ಸಮರ್ಥರಿದ್ದೇವೆ’’ ಎಂದು ಆಪ್ ವಕ್ತಾರೆ ಪ್ರಿಯಾಂಕ ಕಕ್ಕರ್ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಮೈತ್ರಿಕೂಟದ ಪಾಲುದಾರರನ್ನು ಗಂಭೀರವಾಗಿ ಪರಿಗಣನೆಗೆ ತೆಗೆದಕೊಳ್ಳಲಿಲ್ಲವೆಂದು ಅವರು ದೂರಿದರು. ಅತಿಯಾದ ಆತ್ಮವಿಶ್ವಾಸವೇ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯಿತೆಂದು ಕಕ್ಕರ್ ಟೀಕಿಸಿದರು.

‘‘ಕಳೆದ ಹತ್ತು ವರ್ಷಗಳಿಂದ ದಿಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸ್ಥಾನವನ್ನು ಹೊಂದಿದೆ. ಆದರೂ, ಈ ಸಲದ ದಿಲ್ಲಿ ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು, ಕಾಂಗ್ರೆಸ್‌ಗೆ ಮೂರು ಕ್ಷೇತ್ರಗಳನ್ನು ಸ್ಪರ್ಧೆಗೆ ಬಿಟ್ಟುಕೊಟ್ಟಿತ್ತು. ಇಷ್ಟಿದ್ದರೂ, ಹರ್ಯಾಣದಲ್ಲಿ ಮಿತ್ರಪಕ್ಷಗಳನ್ನು ಜೊತೆಯಾಗಿ ಕೊಂಡೊಯ್ಯುವುದು ಅಗತ್ಯವೆಂದು ಅದಕ್ಕೆ ತೋಚಲಿಲ್ಲ’’ ಎಂದರು.

ಹರ್ಯಾಣದಲ್ಲಿ ಚುನಾವಣಾ ಮೈತ್ರಿಯನ್ನು ಏರ್ಪಡಿಸುವ ಇಂಡಿಯಾ ಮೈತ್ರಿಕೂಟದ ಎಲ್ಲಾ ಪ್ರಯತ್ನಗಳನ್ನು ಕಾಂಗ್ರೆಸ್ ವಿಫಲಗೊಳಿಸಿತ್ತು ಎಂದು ಕಕ್ಕರ್ ಆಪಾದಿಸಿದರು.

ಸೀಟು ಹಂಚಿಕೆಯ ಕುರಿತ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಆಪ್ ಹಾಗೂ ಕಾಂಗ್ರೆಸ್ ಪಕ್ಷಗಳು ಚುನಾವಣಾ ಮೈತ್ರಿಯನ್ನು ಏರ್ಪಡಿಸಲು ವಿಫಲವಾಗಿದ್ದವು.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಪ್ ತಾನು ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲಿ ಸೋಲನುಭವಿಸಿತ್ತು. ಕಾಂಗ್ರೆಸ್ ಪಕ್ಷವು ನಿರೀಕ್ಷಿತ ಸಾಧನೆಯನ್ನು ತೋರದೆ, ಬಿಜೆಪಿಯು 48 ಸ್ಥಾನಗಳನ್ನು ಗಳಿಸಿ, ಸರಳ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರಕ್ಕೇರುವುದಕ್ಕೆ ದಾರಿ ಮಾಡಿಕೊಟ್ಟಿತ್ತು.

Full View

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News