ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಆರೋಪ: ಯುವಕನ ಥಳಿಸಿ ಹತ್ಯೆ
ಚಂಡೀಗಢ: ಗುರುದ್ವಾರವೊಂದರ ಬಳಿ ಸಿಖ್ಖರ ಪವಿತ್ರ ಗ್ರಂಥವಾದ ಗುರುಗ್ರಂಥ ಸಾಹಿಬ್ ನ ಕೆಲವು ಪುಟಗಳನ್ನು ಹರಿದು ಹಾಕಿದ ಎಂಬ ಕಾರಣಕ್ಕೆ 19 ವರ್ಷದ ಯುವಕನೊಬ್ಬನನ್ನು ಥಳಿಸಿ ಹತ್ಯೆಗೈದಿರುವ ಘಟನೆ ಶನಿವಾರ ಪಂಜಾಬ್ ನ ಫಿರೋಝ್ ಪುರ್ ನಲ್ಲಿ ನಡೆದಿದೆ.
ಬಂದಾಲಾ ಗ್ರಾಮದ ಬಾಬಾ ಬೀರ್ ಸಿಂಗ್ ಗುರುದ್ವಾರದ ಬಳಿ ಬಕ್ಷಿಶ್ ಸಿಂಗ್ ಎಂಬ ಯುವಕ ಈ ಅಪವಿತ್ರ ಕಾರ್ಯವನ್ನು ಎಸಗಿದ್ದು, ಇದನ್ನು ಕಂಡ ಜನರ ಗುಂಪು ಆಕ್ರೋಶಗೊಂಡು ಆತನನ್ನು ಹಿಡಿದು ಥಳಿಸಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುಖ್ವಿಂದರ್ ಸಿಂಗ್ ಹೇಳಿದ್ದಾರೆ.
ಗುರುದ್ವಾರವನ್ನು ಅಪವಿತ್ರಗೊಳಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ದೂರು ನೀಡಿರುವ ಮೃತ ಯುವಕನ ತಂದೆ ಲಖ್ವಿಂದರ್ ಸಿಂಗ್, ತನ್ನ ಪುತ್ರ ಮಾನಸಿಕ ಅಸ್ವಸ್ಥನಾಗಿದ್ದು, ಆತನಿಗೆ ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ನನ್ನ ಪುತ್ರನನ್ನು ಹತ್ಯೆಗೈದವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಪೊಲೀಸರನ್ನು ಆಗ್ರಹಿಸಿದ್ದಾರೆ.
ಮೃತ ಬಕ್ಷಿಶ್ ಈ ಹಿಂದೆಂದೂ ಗುರುದ್ವಾರಕ್ಕೆ ಭೇಟಿ ನೀಡಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಸಿಖ್ಖರ ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿದ ನಂತರ, ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಆದರೆ, ಸ್ಥಳೀಯರು ಆತನನ್ನು ಸೆರೆ ಹಿಡಿದರು ಎಂದು ಹೇಳಲಾಗಿದೆ. ಧಾರ್ಮಿಕ ಗ್ರಂಥವನ್ನು ಅಪವಿತ್ರಗೊಳಿಸಿದ ಸುದ್ದಿ ಹರಡುತ್ತಿದ್ದಂತೆಯೆ ಗುರುದ್ವಾರದ ಬಳಿ ನೆರೆದ ಗ್ರಾಮಸ್ಥರು, ಆತನನ್ನು ಥಳಿಸಿದರು ಎಂದು ವರದಿಯಾಗಿದೆ.
ನಂತರ ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಆತ ಆ ಹೊತ್ತಿಗಾಗಲೇ ಮೃತಪಟ್ಟಿದ್ದ ಎಂದು ಹೇಳಲಾಗಿದೆ.