ಅದಾನಿ ಗ್ರೂಪಿನ ಕಲ್ಲಿದ್ದಲು ಆಮದು ಪ್ರಕರಣ: ತನಿಖೆ ಪುನರಾರಂಭಿಸಲು ಸರಕಾರದ ಚಿಂತನೆ

Update: 2023-11-17 14:05 GMT

Photo: PTI 

ಹೊಸದಿಲ್ಲಿ: ಕಂದಾಯ ಗುಪ್ತಚರ ಮಹಾನಿರ್ದೇಶನಾಲಯ (DRI)ವು ಕಲ್ಲಿದ್ದಲು ಆಮದುಗಳ ಅಧಿಕ ಮೌಲ್ಯಮಾಪನ ಆರೋಪದಲ್ಲಿ ಅದಾನಿ ಗ್ರೂಪ್ ವಿರುದ್ಧ ತನಿಖೆಯನ್ನು ಪುನರಾರಂಭಿಸಲು ಮುಂದಾಗಿದೆ. ಸಿಂಗಾಪುರದಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ತಮಗೆ ಅನುಮತಿ ನೀಡುವಂತೆ ತನಿಖಾಧಿಕಾರಿಗಳು ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿದ್ದಾರೆ.

2016ರಿಂದ ಅದಾನಿಯವರ ಉದ್ಯಮಕ್ಕೆ ಸಂಬಂಧಿಸಿದ ಸಿಂಗಾಪುರ ಪ್ರಾಧಿಕಾರದ ವಹಿವಾಟು ದಾಖಲೆಗಳನ್ನು ಪಡೆಯಲು ಡಿಆರ್ಐ ಪ್ರಯತ್ನಿಸುತ್ತಿದೆ.

ಇಂಡೋನೇಶ್ಯದ ಪೂರೈಕೆದಾರರಿಂದ ಅದಾನಿ ಗ್ರೂಪಿನ ಹೆಚ್ಚಿನ ಕಲ್ಲಿದ್ದಲು ಆಮದುಗಳನ್ನು ಮೊದಲಿಗೆ ಸಿಂಗಾಪುರದಲ್ಲಿರುವ ಅದರ ಅಂಗಸಂಸ್ಥೆ ಅದಾನಿ ಗ್ಲೋಬಲ್ ಪಿಟಿಇ ಹೆಸರಿನಲ್ಲಿ ಬಿಲ್ ಮಾಡಲಾಗಿತ್ತು. ಬಿಲ್ ನಲ್ಲಿ ಹೆಚ್ಚಿನ ಬೆಲೆಗಳನ್ನು ನಮೂದಿಸಲಾಗಿತ್ತು. ನಂತರ ಗ್ರೂಪ್ನ ಭಾರತೀಯ ಘಟಕಗಳ ಹೆಸರುಗಳಲ್ಲಿ ಬಿಲ್ ಮಾಡಲಾಗಿತ್ತು ಎಂದು ಡಿಆರ್ಐ ಶಂಕಿಸಿದೆ.

ದಾಖಲೆಗಳ ಬಿಡುಗಡೆಯನ್ನು ತಡೆಯಲು ಅದಾನಿ ಎಂಟರ್ಪ್ರೈಸಸ್ ಮತ್ತು ಅದರ ಅಂಗಸಂಸ್ಥೆಗಳು ಸಿಂಗಾಪುರ ಮತ್ತು ಭಾರತದಲ್ಲಿ ಹಲವಾರು ಕಾನೂನು ಸವಾಲುಗಳನ್ನು ಒಡ್ಡಿವೆ ಎನ್ನುವುದನ್ನು ನ್ಯಾಯಾಲಯದ ದಾಖಲೆಗಳು ತೋರಿಸಿವೆ.

ಆದರೆ ಯಾವುದೇ ತಪ್ಪು ಮಾಡಿರುವುದನ್ನು ನಿರಾಕರಿಸಿರುವ ಅದಾನಿ ಗ್ರೂಪ್ ನ ಅಧಿಪತಿ ಗೌತಮ್ ಅದಾನಿ, ಬಂದರುಗಳಿಂದ ತನ್ನ ಕಲ್ಲಿದ್ದಲು ಬಿಡುಗಡೆಗೊಳ್ಳುವ ಮೊದಲೇ ಅಧಿಕಾರಿಗಳು ಅವುಗಳ ಮೌಲ್ಯಮಾಪನ ಮಾಡಿದ್ದರು ಎಂದು ಹೇಳಿದ್ದಾರೆ.

ಅ.9ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿವೇದನೆಯಲ್ಲಿ ಡಿಆರ್ಐ ಸಿಂಗಾಪುರದಿಂದ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸುವುದನ್ನು ನಿರ್ಬಂಧಿಸಲು ಅದಾನಿಗೆ ಅವಕಾಶ ನೀಡಿದ್ದ ಕೆಳ ನ್ಯಾಯಾಲಯದ ಹಿಂದಿನ ಆದೇಶವನ್ನು ರದ್ದುಗೊಳಿಸುವಂತೆ ಕೋರಿತ್ತು.

ಡಿಆರ್ಐ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂಬ ಅದಾನಿ ಹೇಳಿಕೆಯನ್ನು ಅಲ್ಲಗಳೆದಿರುವ ಅಧಿಕಾರಿಗಳು, ಪರಸ್ಪರ ಕಾನೂನು ನೆರವು ಒಪ್ಪಂದದಡಿ ಸಿಂಗಾಪುರದಿಂದ ಮಾಹಿತಿಯನ್ನು ಕೋರಲು ಏಜೆನ್ಸಿಗೆ ಅಧಿಕಾರವಿದೆ ಎಂದು ಹೇಳಿದ್ದಾರೆ.

ನಾಲ್ಕು ವರ್ಷಗಳ ಹಿಂದೆಯೇ ಅಧಿಕಾರಿಗಳು ಕೋರಿದ್ದ ವಿವರಗಳು ಮತ್ತು ದಾಖಲೆಗಳನ್ನು ಸಲ್ಲಿಸಲಾಗಿದ್ದು, ನಂತರ ಅಧಿಕಾರಿಗಳು ಯಾವುದೇ ಕೊರತೆ ಅಥವಾ ಆಕ್ಷೇಪವನ್ನು ವ್ಯಕ್ತಪಡಿಸಿರಲಿಲ್ಲ ಎಂದು ಅದಾನಿ ಗ್ರೂಪ್ ಸುದ್ದಿಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.

ಹಿಂಡೆನ್ ಬರ್ಗ್ ರೀಸರ್ಚ್ ನ ವರದಿಯ ಬಿಡುಗಡೆಯ ಬಳಿಕ ಅದಾನಿ ಗ್ರೂಪ್ ನ ಮೇಲೆ ಸೆಬಿಯ ಹೆಚ್ಚಿನ ನಿಗಾದ ನಡುವೆಯೇ ಕಲ್ಲಿದ್ದಲು ಆಮದು ಪ್ರಕರಣಕ್ಕೆ ಮರುಜೀವ ನೀಡಲು ಪ್ರಯತ್ನ ನಡೆಯುತ್ತಿದೆ.

ಡಿಆರ್ಐ 40 ಕಂಪನಿಗಳ ವ್ಯಾಪಕ ತನಿಖೆಯ ಭಾಗವಾಗಿ 2014ರಲ್ಲಿ ಅದಾನಿಯ ಆಮದುಗಳ ಪರಿಶೀಲನೆಯನ್ನು ಆರಂಭಿಸಿದ್ದು, ಇಂಡೋನೇಶ್ಯಾದಿಂದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಸಿಂಗಾಪುರ ಮತ್ತು ಇತರೆಡೆಗಳಲ್ಲಿಯ ಮಧ್ಯವರ್ತಿಗಳ ಮೂಲಕ ರವಾನಿಸಿರುವ ಕಲ್ಲಿದ್ದಲಿನ ಬಿಲ್ ಗಳನ್ನು ತೋರಿಸುವ ಮೂಲಕ ಪೂರೈಕೆಗಳನ್ನು ಓವರ್-ಇನ್ವಾಯ್ಸ್ ಮಾಡುತ್ತಿವೆ ಎಂದು ತನಿಖಾಧಿಕಾರಿಗಳು ಪ್ರತಿಪಾದಿಸಿದ್ದಾರೆ.

ಭಾರತವು ಸಿಂಗಾಪುರದಿಂದ ಪಡೆಯಲು ಬಯಸಿರುವ ಸಾಕ್ಷ್ಯಾಧಾರಗಳು ಅಲ್ಲಿಯ 20 ಬ್ಯಾಂಕುಗಳಲ್ಲಿ ಅದಾನಿಯವರ ವಹಿವಾಟು ದಾಖಲೆಗಳನ್ನು ಒಳಗೊಂಡಿವೆ ಮತ್ತು ಇವು ಪ್ರಕರಣದಲ್ಲಿ ಹಣಕಾಸಿನ ಜಾಡನ್ನು ಗುರುತಿಸಲು ನೆರವಾಗುತ್ತವೆ ಎಂದು ಬಲ್ಲ ಮೂಲವೊಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News