ಬಾಂಗ್ಲಾದಿಂದ ವಿದ್ಯುತ್ ಬಿಲ್ ಬಾಕಿ: ಸರಬರಾಜು ಸ್ಥಗಿತಗೊಳಿಸುವ ಸೂಚನೆ ನೀಡಿದ ಅದಾನಿ ಪವರ್
ಹೊಸದಿಲ್ಲಿ: ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದ ವಿದ್ಯುತ್ ಬಿಲ್ ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ವಿದ್ಯುತ್ ಪೂರೈಕೆಯನ್ನು ಕಡಿಮೆ ಮಾಡಿರುವ ಅದಾನಿ ಪವರ್, ಸುಮಾರು 7200 ಕೋಟಿ ರೂಪಾಯಿ ಬಾಕಿಯನ್ನು ಪಾವತಿಸುವ ಸಂಬಂಧ ನವೆಂಬರ್ 7ರ ಒಳಗೆ ಸ್ಪಷ್ಟತೆ ನೀಡದೇ ಇದ್ದರೆ, ಸರಬರಾಜು ಸ್ಥಗಿತಗೊಳಿಸುವುದಾಗಿ ತಾಕೀತು ಮಾಡಿದೆ.
ಅದಾನಿ ಸಂಸ್ಥೆ ಈ ಮೊದಲು ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿಗೆ ಪತ್ರ ಬರೆದು, ಅಕ್ಟೋಬರ್ 31ರ ಒಳಗಾಗಿ 170 ದಶಲಕ್ಷ ಡಾಲರ್ (ಸುಮಾರು 1500 ಕೋಟಿ ರೂಪಾಯಿ) ಮೊತ್ತದ ಭದ್ರತೆಗಾಗಿ ಲೆಟರ್ ಆಫ್ ಕ್ರೆಡಿಟ್ ನೀಡುವಂತೆ ಆಗ್ರಹಿಸಿತ್ತು. ಕೃಷಿಕ್ ಬ್ಯಾಂಕ್ ಮೂಲಕ ಬಿಪಿಡಿಬಿ ಲೆಟರ್ ಆಫ್ ಕ್ರೆಡಿಟ್ ನೀಡಲು ಮುಂದಾಗಿತ್ತು. ಆದರೆ ಅದು ವಿದ್ಯುತ್ ಖರೀದಿ ಒಪ್ಪಂದಕ್ಕೆ ಅನುಗುಣವಾಗಿರಲಿಲ್ಲ ಎಂದು ಮೂಲಗಳು ಹೇಳಿವೆ. ಡಾಲರ್ ಗಳ ಕೊರತೆ ಇದಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಅದಾನಿ ಪವರ್ ಜಾರ್ಖಂಡ್, ಅಕ್ಟೋಬರ್ 31ರಿಂದ ವಿದ್ಯುತ್ ಪೂರೈಕೆಯನ್ನು ಕಡಿಮೆ ಮಾಡಿತ್ತು. ಬಾಂಗ್ಲಾದೇಶದ ಪವರ್ ಗ್ರಿಡ್ ವರದಿಯ ಪ್ರಕಾರ, ಶುಕ್ರವಾರ ಜಾರ್ಖಂಡ್ನ ಗೊಡ್ಡಾದಲ್ಲಿರುವ ಅದಾನಿ ಪ್ಲಾಂಟ್ 724 ಮೆಗಾವ್ಯಾಟ್ ವಿದ್ಯುತ್ ಪೂರೈಸಿದ್ದು, ಈ ಘಟಕದ ಸಾಮಥ್ರ್ಯ 1496 ಮೆಗಾವ್ಯಾಟ್ ಆಗಿದೆ. ಅದಾನಿ ಪವರ್ ಜಾರ್ಖಂಡ್ ಅತಿದೊಡ್ಡ ವಿದ್ಯುತ್ ಪೂರೈಕೆ ಸಂಸ್ಥೆಯಾಗಿದ್ದು, ಪೈರಾ (1244 ಮೆಗಾವ್ಯಾಟ್), ರಾಂಪಲ್ (1234) ಮತ್ತು ಎಸ್ಎಸ್ ಪವರ್ 1( 1224) ಇತರ ವಿದ್ಯುತ್ ಪೂರೈಕೆ ಘಟಕಗಳು.
ಬಗೇರ್ಹಾತ್ನಲ್ಲಿರುವ ಬಾಂಗ್ಲಾದೇಶ ಇಂಡಿಯಾ ಫ್ರೆಂಡ್ಶಿ ಪವರ್ ಕಂಪನಿಯು ಎನ್ಟಿಪಿಸಿ ಜತೆಗಿನ ಜಂಟಿ ಸಹಯೋಗದ ಸಂಸ್ಥೆಯಾಗಿದ್ದು, ಎಸ್ಎಸ್ ಪವರ್ 1 ಈಗಾಗಲೇ ಕಲ್ಲಿದ್ದಲು ಕೊರತೆಯಿಂದಾಗಿ ಒಟ್ಟು ಸಾಮರ್ಥ್ಯದ ಅರ್ಧದಷ್ಟು ವಿದ್ಯುತ್ತನ್ನು ಮಾತ್ರ ಉತ್ಪಾದಿಸುತ್ತಿದೆ ಎಂದು ಪಿಬಿಜಿಯ ದೈನಿಕ ವರದಿ ತೋರಿಸುತ್ತದೆ.