ಕೇಂದ್ರದಿಂದ ಕೃಷಿ, ಕೈಗಾರಿಕಾ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ
ಹೊಸದಿಲ್ಲಿ: ಕೇಂದ್ರ ಸರಕಾರವು ಕೃಷಿ ಹಾಗೂ ಕೈಗಾರಿಕಾ ಕಾರ್ಮಿಕರ ಕೇಂದ್ರೀಯ ಕನಿಷ್ಠ ವೇತನವನ್ನು ಗುರುವಾರ ಏರಿಕೆ ಮಾಡಿದೆ. ಈ ಬಗ್ಗೆ ಕೇಂದ್ರ ಕಾರ್ಮಿಕ ಆಯುಕ್ತರು ಅಧಿಸೂಚನೆಯೊಂದನ್ನು ಹೊರಡಿಸಿದ್ದಾರೆ.
ನೂತನ ವೇತನ ಪರಿಷ್ಕರಣೆಯಿಂದಾಗಿ ಕಟ್ಟಡ ನಿರ್ಮಾಣ, ಗುಡಿಸುವಿಕೆ, ಸ್ವಚ್ಥತೆ,ಲೋಡಿಂಗ್ ಹಾಗೂ ಅನ್‌ಲೋಡಿಂಗ್‌ನಂತಹ ಕುಶಲತೆರಹಿತ ಕಾರ್ಮಿಕರ ವೇತನವನ್ನು ದಿನಕ್ಕೆ 783 ರೂ.ಅಥವಾ ತಿಂಗಳಿಗೆ 20,358 ರೂ., ಇವುಗಳಲ್ಲಿ ಯಾವುದು ಅಧಿಕವೋ ಅದು ಕನಿಷ್ಠ ವೇತನವಾಗಿರುವುದು ಎಂದು ಅಧಿಸೂಚನೆ ತಿಳಿಸಿದೆ.
ಕನಿಷ್ಠ ವೇತನ ಕಾಯ್ದೆ 1948ರಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಅಧಿಕಾರ ವ್ಯಾಪ್ತಿಯಡಿ ಬರುವ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನಗಳನ್ನು ನಿಗದಿಪಡಿಸುವ, ಪರಾಮರ್ಶಿಸುವ ಹಾಗೂ ಪರಿಷ್ಕರಿಸುವ ಅಧಿಕಾರವನ್ನು ಹೊಂದಿದೆ.ಕನಿಷ್ಠ ವೇತನ ಏರಿಕೆಯ ಕಟ್ಟಡ ನಿರ್ಮಾಣ, ಲೋಡಿಂಗ್ ಹಾಗೂ ಅನ್‌ಲೋಡಿಂಗ್ ಕಾರ್ಮಿಕರು, ಸೆಕ್ಯುರಿಟಿ ಗಾರ್ಡ್‌ಗಳು, ಹೌಸ್‌ಕೀಪಿಂಗ್, ಗಣಿಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ತೊಡಗಿರು ಕಾರ್ಮಿಕರ ಕನಿಷ್ಠ ವೇತನದರದಲ್ಲಿ
ಏರಿಕೆಯಾಗಲಿದೆ. ನೂತನ ವೇತನ ದರಗಳು 2024ರ ಆಕ್ಟೋಬರ್ 1ರಿಂದ ಜಾರಿಗೆ ಬರಲಿದೆ. ಈ ಮೊದಲು ಕೇಂದ್ರ ಸರಕಾರವು ಈ ವರ್ಷದ ಎಪ್ರಿಲ್‌ನಲ್ಲಿ ಕನಿಷ್ಠ ವೇತನವನ್ನು ಹೆಚ್ಚಿಸಿತ್ತು.