ಚುನಾವಣಾ ಪೋರ್ಟಲ್‌ನಲ್ಲಿ ಆಪ್ ಗೆ ನಿಂದನೆ ಆರೋಪ: ಹರ್ಯಾಣ ಮುಖ್ಯ ಚುನಾವಣಾಧಿಕಾರಿಯಿಂದ ವರದಿ ಕೋರಿದ ಚುನಾವಣಾ ಆಯೋಗ
ಹೊಸದಿಲ್ಲಿ: ಹರ್ಯಾಣದಲ್ಲಿ ಎರಡು ಚುನಾವಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮನವಿ ಮಾಡಲಾಗಿದ್ದ ಅರ್ಜಿಗೆ ನಿಂದನಾತ್ಮಕ ಭಾಷೆಯ ಪ್ರತಿಕ್ರಿಯೆ ದೊರೆತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದ ಮರುದಿನ, ಶನಿವಾರದಂದು ಈ ಘಟನೆಯ ಕುರಿತು ವರದಿ ನೀಡುವಂತೆ ಹರ್ಯಾಣ ಮುಖ್ಯ ಚುನಾವಣಾಧಿಕಾರಿ ಅನುರಾಗ್ ಅಗರ್ವಾಲ್ ಅವರಿಗೆ ಭಾರತೀಯ ಚುನಾವಣಾ ಆಯೋಗವು ಸೂಚಿಸಿದೆ.
ಅವಹೇಳನಾಕಾರಿ ಪೋಸ್ಟ್‌ಗಾಗಿ ಐವರು ಸಿಬ್ಬಂದಿಗಳನ್ನು ಅಮಾನತುಗೊಳಿಸಲಾಗಿದ್ದು, ಈ ಸಂಬಂಧ ಎಫ್ ಐ ಆರ್ ಕೂಡಾ ದಾಖಲಾಗಿದೆ.
ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳಿಗಾಗಿ ಇರುವ ಸುವಿಧಾ ಪೋರ್ಟಲ್ ಮೂಲಕ ರವಿವಾರ ಎರಡು ಚುನಾವಣಾ ಕಾರ್ಯಕ್ರಮವನ್ನು ಆಯೋಜಿಸಲು ಆಮ್ ಆದ್ಮಿ ಪಕ್ಷವು ಮನವಿ ಸಲ್ಲಿಸಿತ್ತು. ಈ ಪೈಕಿ ಒಂದು ಅರ್ಜಿಯನ್ನು ನಿರಾಕರಿಸಲಾಗಿದೆ ಎಂದು ಹರ್ಯಾಣಿ ಭಾಷೆಯಲ್ಲಿ ಉತ್ತರಿಸಿದ್ದರೆ, ಮತ್ತೊಂದು ಅರ್ಜಿಗೆ ನಿಂದನಾತ್ಮಕ ಪ್ರತಿಕ್ರಿಯೆ ನೀಡಲಾಗಿದೆ ಎಂದು ಕುರುಕ್ಷೇತ್ರ ಲೋಕಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಸುಶೀಲ್ ಕುಮಾರ್ ಗುಪ್ತಾ ಶುಕ್ರವಾರ ಆರೋಪಿಸಿದ್ದರು.
ಈ ಆರೋಪವನ್ನು ಕೈತಾಲ್ ಜಿಲ್ಲಾಧಿಕಾರಿ ದೃಢೀಕರಿಸಿದ್ದು, ಈ ಸಂಬಂಧ ಐದು ಮಂದಿಯನ್ನು ಅಮಾನುಗೊಳಿಸಲಾಗಿದ್ದು, ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.