ಕೋಮುವಾದಿ ಸಂಹಿತೆ ಎಂಬ ಹೇಳಿಕೆಯು ಅಂಬೇಡ್ಕರ್ ಗೆ ಮಾಡಿದ ಅವಮಾನ: ಪ್ರಧಾನಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ಹೊಸದಿಲ್ಲಿ: 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಹಾಲಿ ಅಸ್ತಿತ್ವದಲ್ಲಿರುವ ನಾಗರಿಕ ಕಾನೂನುಗಳು ಕೋಮುವಾದಿ ಸಂಹಿತೆಗಳಾಗಿದ್ದು, ಭಾರತದ ನೈಜ ವೈವಿಧ್ಯಮಯ ಸಮಾಜವನ್ನು ಪ್ರತಿಬಿಂಬಿಸುವ ಜಾತ್ಯತೀತ ನಾಗರಿಕ ಕಾನೂನುಗಳನ್ನು ಜಾರಿಗೆ ತರಬೇಕಾದ ಅಗತ್ಯವಿದೆ ಎಂದು ನೀಡಿರುವ ಹೇಳಿಕೆಯ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಇದು ಅಂಬೇಡ್ಕರ್ ಅವರಿಗೆ ಮಾಡಿರುವ ಅವಮಾನವಾಗಿದೆ ಎಂದು ಆರೋಪಿಸಿದೆ.
ಕೆಂಪುಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, “ಸಮಾನ ನಾಗರಿಕ ಸಂಹಿತೆ ಕುರಿತು ಸುಪ್ರೀಂ ಕೋರ್ಟ್ ಮತ್ತೆ ಮತ್ತೆ ಚರ್ಚೆ ಹಮ್ಮಿಕೊಂಡಿದೆ. ಅದು ಹಲವಾರು ಬಾರಿ ಈ ಕುರಿತು ಆದೇಶವನ್ನೂ ನೀಡಿದೆ. ಅದನ್ನೇ ದೇಶದ ದೊಡ್ಡ ಭಾಗ ನಂಬಿಕೊಂಡಿದೆ. ನಾವು ಜೀವಿಸುತ್ತಿರುವ ಕಾಲ ಘಟ್ಟದ ನಾಗರಿಕ ಸಂಹಿತೆಯು ನೈಜವಾಗಿ ಕೋಮುವಾದಿ ನಾಗರಿಕ ಸಂಹಿತೆ ಎಂಬುದು ನಿಜವಾಗಿದೆ. ಈ ಹೊತ್ತಿನಲ್ಲಿ ದೇಶದಲ್ಲಿ ಜಾತ್ಯತೀತ ನಾಗರಿಕ ಸಂಹಿತೆ ಇರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಆಗ ಮಾತ್ರ ನಾವು ಧರ್ಮಾಧಾರಿತ ತಾರತಮ್ಯದಿಂದ ಮುಕ್ತವಾಗಲು ಸಾಧ್ಯ” ಎಂದು ಹೇಳಿದ್ದರು.
ಪ್ರಧಾನಿ ಮೋದಿಯ ಈ ಹೇಳಿಕೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷದ ಜೈರಾಮ್ ರಮೇಶ್, ಪ್ರಧಾನಿ ಮೋದಿ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದು, 21ನೇ ಕಾನೂನು ಆಯೋಗವು ಪೂರ್ಣಪ್ರಮಾಣದ ಸಮಾನ ನಾಗರಿಕ ಸಂಹಿತೆಯ ಜಾರಿಯ ವಿರುದ್ಧ ವಾದ ಮಂಡಿಸಿದೆ ಎಂಬುದರತ್ತ ಬೊಟ್ಟು ಮಾಡಿದ್ದಾರೆ.
“ಅಜೈವಿಕ ಪ್ರಧಾನಿಯ ಇತಿಹಾಸವನ್ನು ತಿರುಚುವ, ಕುಚೇಷ್ಟೆ ಮಾಡುವ ಹಾಗೂ ಕಳಂಕ ತರುವ ಸಾಮರ್ಥ್ಯಕ್ಕೆ ಗಡಿ ಎಂಬುದೇ ಇಲ್ಲ. ಅದು ಇಂದು ಕೆಂಪು ಕೋಟೆಯ ಮೇಲಿಂದ ಸಂಪೂರ್ಣವಾಗಿ ಅನಾವರಣಗೊಂಡಿದೆ. ನಾವು ಇಲ್ಲಿಯವರೆಗೆ ಕೋಮುವಾದಿ ನಾಗರಿಕ ಸಂಹಿತೆಯನ್ನು ಹೊಂದಿದ್ದೆವು ಎಂಬುದು ಅಂಬೇಡ್ಕರ್ ಅವರಿಗೆ ಮಾಡುವ ಭಾರಿ ಅವಮಾನವಾಗಿದೆ. 1950ರ ಮಧ್ಯಭಾಗದಲ್ಲಿ ನೈಜವಾಗಿ ಹೊರ ಹೊಮ್ಮಿದ್ದ ಹಿಂದೂ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆ ತಂದ ಮಹಾನ್ ದಾರ್ಶನಿಕರವರು” ಎಂದು ಜೈರಾಮ್ ರಮೇಶ್ ಬಣ್ಣಿಸಿದ್ದಾರೆ.
“ಈ ಸುಧಾರಣೆಗಳನ್ನು ಆರೆಸ್ಸೆಸ್ ಹಾಗೂ ಜನಸಂಘ ತೀವ್ರವಾಗಿ ವಿರೋಧಿಸಿದ್ದವು” ಎಂದೂ ಅವರು ಹೇಳಿದ್ದಾರೆ.
ಸಮಾನ ನಾಗರಿಕ ಸಂಹಿತೆಯನ್ನು ಪರಿಚಯಿಸಬೇಕು ಎಂಬುದು ಬಿಜೆಪಿ ಪ್ರಣಾಳಿಕೆಯ ದೀರ್ಘಕಾಲೀನ ಭಾಗವಾಗಿದೆ. ಹಲವಾರು ಬಿಜೆಪಿ ಆಡಳಿತಾರೂಢ ರಾಜ್ಯಗಳು ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಕ್ರಮ ಕೈಗೊಂಡಿದ್ದು, ಸಮಾನ ನಾಗರಿಕ ಸಂಹಿತೆಯನ್ನು ಅಳವಡಿಸಿಕೊಂಡಿರುವ ಮೊತ್ತ ಮೊದಲ ರಾಜ್ಯ ಉತ್ತರಾಖಂಡವಾಗಿದೆ.