ತೈವಾನ್ ಸ್ವಾತಂತ್ರ್ಯವನ್ನು ಅಮೆರಿಕ ಬೆಂಬಲಿಸುವುದಿಲ್ಲ: ಬೈಡನ್

Update: 2024-01-14 16:53 GMT

ಜೋ ಬೈಡನ್ \ Photo: PTI 

ವಾಷಿಂಗ್ಟನ್ : ಸ್ವಯಂ ಆಡಳಿತ ವ್ಯವಸ್ಥೆಯಿರುವ ತೈವಾನ್ನ ಸ್ವಾತಂತ್ರ್ಯವನ್ನು ಅಮೆರಿಕ ಬೆಂಬಲಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದು, ಒಂದು ಚೀನಾ ನೀತಿಗೆ ಅಮೆರಿಕದ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

ತೈವಾನ್ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ `ಡೆಮೊಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಡಿಪಿಪಿ)ಯ ಮುಖಂಡ ಲೈ ಚಿಂಗ್-ಟೆರ ಗೆಲುವನ್ನು ಅಮೆರಿಕ ಸ್ವಾಗತಿಸಿ, ತೈವಾನ್ ಜನತೆ ಮತ್ತೊಮ್ಮೆ ತಮ್ಮ ದೃಢವಾದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣಾ ಪ್ರಕ್ರಿಯೆಯ ಶಕ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ನೀಡಿದ ಹೇಳಿಕೆಯನ್ನು ಚೀನಾ ತೀವ್ರವಾಗಿ ಖಂಡಿಸಿದ ಬೆನ್ನಲ್ಲೇ ಬೈಡನ್ ಈ ಹೇಳಿಕೆ ನೀಡಿದ್ದಾರೆ. ತೈವಾನ್ ಚುನಾವಣೆಗೆ ಸಂಬಂಧಿಸಿ ಅಮೆರಿಕ ನೀಡಿದ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇವೆ ಮತ್ತು ವಿರೋಧಿಸುತ್ತೇವೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿಕೆ ನೀಡಿದೆ.

ಶನಿವಾರ ನಡೆದ ಮತ ಎಣಿಕೆಯ ಬಳಿಕ ಲೈ ಚಿಂಗ್-ಟೆ ತಮ್ಮ ನಿಕಟ ಪ್ರತಿಸ್ಪರ್ಧಿ ಕೌಮಿಂಟಾಂಗ್ ಪಕ್ಷದ ಯೂ-ಇಹ್ ಎದುರು ಗೆಲುವು ಸಾಧಿಸಿರುವುದಾಗಿ ಚುನಾವಣಾ ಆಯೋಗ ಘೋಷಿಸಿದೆ. ತೈವಾನ್ ತನ್ನ ಭೂಪ್ರದೇಶದ ವ್ಯಾಪ್ತಿಯಲ್ಲಿದೆ ಎಂದು ಪ್ರತಿಪಾದಿಸುತ್ತಿರುವ ಚೀನಾ, ಅಗತ್ಯಬಿದ್ದರೆ ಬಲಪ್ರಯೋಗ ನಡೆಸಿಯಾದರೂ ದ್ವೀಪವನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳುತ್ತಿದೆ.

ಅಮೆರಿಕದ ಹೇಳಿಕೆಯು ಒಂದು ಚೀನಾ ನೀತಿಯ ಗಂಭೀರ ಉಲ್ಲಂಘನೆಯಾಗಿದ್ದು ಇದು ತೈವಾನ್ನ ಸ್ವಾತಂತ್ರ್ಯವನ್ನು ಪ್ರತಿಪಾದಿಸುತ್ತಿರುವ ಪ್ರತ್ಯೇಕತಾವಾದಿಗಳಿಗೆ ಬಲವಾದ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅಲ್ಲದೆ ತೈವಾನ್ ಜತೆಗೆ ಅನಧಿಕೃತ ಸಂಬಂಧ ಹೊಂದಿರುವುದಾಗಿ ಅಮೆರಿಕದ ವಾಗ್ದಾನವನ್ನು ಉಲ್ಲಂಘಿಸಿದೆ. ಆದ್ದರಿಂದ ಅಮೆರಿಕಕ್ಕೆ ನಮ್ಮ ಬಲವಾದ ಆಕ್ಷೇಪವನ್ನು ಸಲ್ಲಿಸಿದ್ದೇವೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರರು ಹೇಳಿದ್ದಾರೆ. `ಒಂದು ಚೀನಾ ನೀತಿ'ಯ ಪ್ರಕಾರ, ತೈವಾನ್ ಮೇಲಿನ ಚೀನಾದ ಹಕ್ಕು ಪ್ರತಿಪಾದನೆಯನ್ನು ಅಮೆರಿಕ ಅಂಗೀಕರಿಸಿ, ತೈವಾನ್ ಜತೆಗೆ ಅನೌಪಚಾರಿಕ ಸಂಬಂಧವನ್ನು ನಿರ್ವಹಿಸುತ್ತದೆ.

ಈ ಮಧ್ಯೆ, ಅಮೆರಿಕದ ಕೆಲವು ಮಾಜಿ ಉನ್ನತ ಅಧಿಕಾರಿಗಳನ್ನು ಒಳಗೊಂಡಿರುವ ಅನಧಿಕೃತ ನಿಯೋಗವನ್ನು ತೈವಾನ್ಗೆ ರವಾನಿಸಲು ಬೈಡನ್ ನಿರ್ಧರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News